ಶೃಂಗಸಭೆ ವಿರೋಧಿಸಿ ರೈತ ಸಂಘದ ಪ್ರತಿಭಟನೆ

RAITA
Published on

ಶಿವಮೊಗ್ಗ: ಶ್ರೀಮಂತ ದೇಶಗಳೊಂದಿಗೆ, ಬಂಡವಾಳಶಾಹಿಗಳೊಂದಿಗೆ ಒಪ್ಪಂದ ಕಲ್ಪಿಸಲು ವೇದಿಕೆಯಾಗಿರುವ ಜಿ-20 ಶೃಂಗಸಭೆ ಭಾರತವನ್ನು ಆರ್ಥಿಕ ದಿವಾಳಿತನಕ್ಕೆ ತಳ್ಳುತ್ತದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಡಿಸಿ ಕಚೇರಿ ಎದುರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ಆರಂಭವಾಗಿರುವ ಶಂಗಸಭೆಯಲ್ಲಿ ಹಲವು ಒಪ್ಪಂದಗಳನ್ನು ಮಾಡಿಕೊಳ್ಳುವ ಭಾರತ, ಮುಂದೆ ಇದರದಿಂದ ನಷ್ಟ ಅನುಭವಿಸುವ ಅಪಾಯವಿದೆ. ಇಲ್ಲಿನ ಕೃಷಿ, ಮಾರುಕಟ್ಟೆ ಮೇಲೂ ಇದು ಗಂಭೀರ ಪರಿಣಾಮ ಉಂಟು ಮಾಡಲಿದೆ. ಸಭೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ ಎಂಬ ಕಾರಣಕ್ಕೇ ಪೊಲೀಸ್ ಬಂದೋಬಸ್ತ್‌ನಲ್ಲಿ ಶೃಂಗಸಭೆ ಏರ್ಪಡಿಸಲಾಗಿದೆ ಎಂದು ಹೇಳಿದರು.

ಕರ್ನಾಟಕದ ರಾಜಧಾನಿ ಸಮೀಪವೇ ಶೃಂಗಸಭೆ ನಡೆಯುತ್ತಿರುವುದು ಕನ್ನಡಿಗರ ದೌರ್ಭಾಗ್ಯವಾಗಿದೆ. ಕರೊನಾ ಸಮಯದಲ್ಲಿ ನೆಲಕಚ್ಚಿದ್ದ ಭಾರತದ ಜಿಡಿಪಿ ಇನ್ನೂ ಚೇತರಿಸಿಕೊಂಡಿಲ್ಲ. ನಮ್ಮಲ್ಲಿರುವ ಸಂಪನ್ಮೂಲವನ್ನು ಕೊಳ್ಳೆ ಹೊಡೆಯಲು ಜಿ-20 ರಾಷ್ಟ್ರಗಳು ಹವಣಿಸುತ್ತಿವೆ. ಇದು ಇನ್ನಷ್ಟು ಸಮಸ್ಯೆಯತ್ತ ದೇಶವನ್ನು ಕೊಂಡೊಯ್ಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಒಂದು ಭೂಮಿ-ಒಂದು ಕುಟುಂಬ-ಒಂದು ಭವಿಷ್ಯ ಎಂಬ ಜಿ-20 ಶೃಂಗಸಭೆಯ ಘೋಷ ವಾಕ್ಯವೇ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರಲ್ಲಿ ಹುನ್ನಾರ ಎದ್ದು ಕಾಣಿಸುತ್ತಿದೆ. ನಮ್ಮ ದೇಶಕ್ಕೆ ಮಾರಕವಾಗಿರುವ ಈ ಸಭೆಯನ್ನು ನಾವು ವಿರೋಧಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಉಪಾಧ್ಯಕ್ಷ ಪಿ.ಶೇಖರಪ್ಪ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net