

ಆನಂದಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಗಮನ ಉನ್ನತ ಶಿಕ್ಷಣ ಪಡೆಯುವ ಕಡೆಗೆ ಇರಬೇಕು ಎಂದು ಹೊಸನಗರ ತಾಲೂಕಿನ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎನ್.ಡಿ.ಹೆಗಡೆ ಹೇಳಿದರು.
ಸಮೀಪದ ಆಚಾಪುರದಲ್ಲಿ ಏರ್ಪಡಿಸಿದ್ದ ಕ್ರಿಯೇಟಿವ್ ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಪ್ರೌಢಶಾಲೆವರೆಗೂ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪಟ್ಟಣಕ್ಕೆ ತೆರಳುತ್ತಾರೆ. ಅಲ್ಲಿನ ವಾತಾವರಣದಲ್ಲಿ ಕಲಿಕಾ ಉತ್ಸಾಹ ಕಳೆದುಕೊಂಡು ಕಡಿಮೆ ಅಂಕ ಗಳಿಸುತ್ತಾರೆ. ಪರಿಹಾರವಾಗಿ ಗ್ರಾಮೀಣ ಪ್ರದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ಡಾ. ಮೋಹನ್ ಚಂದ್ರಗುತ್ತಿ ಮಾತನಾಡಿ, ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಎಜುಕೇಷನ್ ಹಬ್ ಸ್ಥಾಪನೆಯ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದರೆ ಗುಣಾತ್ಮಕ ಕಲಿಕೆ ಸಾಧ್ಯ. ಹಳ್ಳಿಗಾಡಿನ ಪ್ರದೇಶದಲ್ಲಿ ಶಾಲೆಗಳನ್ನು ಉಳಿಸಿ ಬೆಳೆಸುವ ಸವಾಲಿದೆ ಎಂದರು.
ವಿದ್ಯಾರ್ಥಿಗಳನ್ನು ಮೊಬೈಲ್ ಗೀಳಿನಿಂದ ಹೊರತರುವ ದೊಡ್ಡ ಸವಾಲು ಸಮಾಜದ ಮುಂದಿದೆ. ಹಳೇ ಕಾಲದ ಗ್ರಾಮೀಣ ಕ್ರೀಡೆಗಳು, ಮನರಂಜನೆಗಳು ಪುನರುತ್ಥಾನಗೊಂಡರೆ ಮಕ್ಕಳ ಮನಸ್ಸು ಸದಾ ಪ್ರುಲ್ಲವಾಗಿರುತ್ತದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದವರೆಗೆ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಡೊಳ್ಳು ಕುಣಿತ, ಯಕ್ಷಗಾನ, ಬಂಜಾರ ನೃತ್ಯ, ಜಾನಪದ ನೃತ್ಯ, ಭಕ್ತಿ ಪ್ರಧಾನ ನೃತ್ಯ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನ ನಡೆಸಿದರು. ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ರಾಧಾಬಾಯಿ, ವೈದ್ಯ ಡಿ.ಎಂ.ಪ್ರಭು, ಮುಖ್ಯಶಿಕ್ಷಕ ಕೃಷ್ಣಮೂರ್ತಿ ಇತರರಿದ್ದರು.