ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಕಲ್ಪಿಸಲು ಶ್ರಮ

1bdvt5
ಭದ್ರಾವತಿಯಲ್ಲಿ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ನಿವೃತ್ತ ಆಡಳಿತ ವಿಮಾ ವೈದ್ಯಾಧಿಕಾರಿ ಡಾ. ಎಚ್.ಆರ್.ವಿಜಯಮೂರ್ತಿ ಉದ್ಘಾಟಿಸಿದರು. ಎಚ್.ಆರ್ ರಂಗನಾಥ್, ರಾಜಾಸಾಬ್ ಇತರರಿದ್ದರು.
Published on

ಭದ್ರಾವತಿ: ನಗರದ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಜಿಲ್ಲಾ ಇಎಸ್‌ಐ ವಿಮಾದಾರರ ಹಾಗೂ ಇತರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಶಾಖೆ ನೂತನ ಅಧ್ಯಕ್ಷ ಎಚ್.ಆರ್.ರಂಗನಾಥ್ ಭರವಸೆ ನೀಡಿದರು.

ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸಂಘದಿಂದ ಬಂಟರ ಭವನದಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ, ಇಎಸ್‌ಐ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ನಗರದಲ್ಲಿ ಕಾರ್ಮಿಕರು ಇಎಸ್‌ಐ ಸೌಲಭ್ಯ ಪಡೆದುಕೊಳ್ಳಲು ಸಾಕಷ್ಟು ತೊಂದರೆ ಅನುಭವಿಸಬೇಕಾದ ಸಂದರ್ಭದಲ್ಲಿ ಎಂಪಿಎಂ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ನಿರಂತರ ಹೋರಾಟ ನಡೆಸಿದರು. ಶಾಸಕರ ಪ್ರಯತ್ನದಿಂದ ಇಎಸ್‌ಐ ಆಸ್ಪತ್ರೆ ಸೌಲಭ್ಯ ಕಾರ್ಮಿಕರಿಗೆ ಲಭಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಆಡಳಿತ ವಿಮಾ ವೈದ್ಯಾಧಿಕಾರಿ ಡಾ. ಎಚ್.ಆರ್.ವಿಜಯಮೂರ್ತಿ, ವಿಮಾ ಕಾರ್ಮಿಕರ ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಕಾರ್ಮಿಕರು ಸಮಸ್ಯೆ ಬಗೆಹರಿಸಿಕೊಳ್ಳಲು ಇಂತಹ ಸಂಘಟನೆಗಳು ಸಹಕಾರಿ ಎಂದರು.

ಕಣ್ಣುಗಳ ರಕ್ಷಣೆ ಮತ್ತು ಆರೋಗ್ಯದ ಬಗ್ಗೆ ನೇತ್ರ ತಜ್ಞ ಡಾ. ಕುಮಾರಸ್ವಾಮಿ ಮಾಹಿತಿ ನೀಡಿದರು. ವಿಮಾದಾರರಿಗೆ ನೇತ್ರ ತಪಾಸಣೆ ನಡೆಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ರಾಜಾಸಾಬ್ ಎಚ್. ನಂದಿಹಳ್ಳಿ, ಸಂಘದ ಜಿಲ್ಲಾ ಶಾಖೆ ಉಪಾಧ್ಯಕ್ಷ ಬಿ.ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಅಜ್ಜಯ್ಯ, ಸಂಘಟನಾ ಕಾರ್ಯದರ್ಶಿ ಎಂ.ಎನ್.ಶಿವಕುಮಾರ್, ಖಜಾಂಚಿ ಕೆ.ವಿ.ರವೀಂದ್ರ, ತಾಲೂಕು ನೂತನ ಉಪಾಧ್ಯಕ್ಷ ಪುಟ್ಟಮಾದಯ್ಯ, ಕಾರ್ಯದರ್ಶಿ ಚಿಕ್ಕಣ್ಣ, ನಿರ್ದೇಶಕ ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net