

ಸೊರಬ: ಪೌಷ್ಟಿಕ ಆಹಾರ ಸೇವನೆ, ಪ್ರತಿದಿನ ವ್ಯಾಯಾಮ ಮಾಡುವುದರಿಂದ, ಧೂಮಪಾನ, ಮದ್ಯಪಾನದಿಂದ ದೂರ ಇರುವುದರಿಂದ ಮೂಳೆಗಳ ಸವೆತ ತಡೆಗಟ್ಟಬಹುದು ಎಂದು ವೈದ್ಯ ಎಂ.ಕೆ.ಭಟ್ ಹೇಳಿದರು.
ಪಟ್ಟಣದಲ್ಲಿ ಲಯನ್ಸ್ ಇಂಟರ್‌ನ್ಯಾಷನಲ್ ಮತ್ತು ಐಎಂಎ ಸೊರಬ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಉಚಿತ ಮೂಳೆ ಸಾಂದ್ರತಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮೂಳೆಗಳು ದೇಹದ ವಿವಿಧ ಅಂಗಗಳನ್ನು ರಕ್ಷಿಸುತ್ತವೆ. ಕೆಂಪು ಮತ್ತು ಬಿಳಿ ರಕ್ತಕಣಗಳನ್ನು ಉತ್ಪಾದನೆ ಮಾಡುತ್ತವೆ. ಪ್ರೋಟೀನ್ ಮತ್ತು ಖನಿಜಗಳಿಂದ ಮಾಡಲ್ಪಟ್ಟ ಘನ ರಚನೆಗಳಾಗಿವೆ. ಮೂಳೆಗಳು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆ ಮೊದಲಾದ ಕಾರಣಗಳಿಂದ ಸಾಂದ್ರತೆ ಕಳೆದುಕೊಳ್ಳುತ್ತವೆ. ಆರೋಗ್ಯಕರ ಆಹಾರ ಸೇವಿಸುವುದರಿಂದ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಎನ್‌ಸಿಆರ್ ಹೆಲ್ತ್ ಕೇರ್ ಇಂಡಿಯಾದ ಟೆಕ್ನೀಷಿಯನ್ ರವಿ ಯಾದವ್ ಮೂಳೆ ಸಾಂದ್ರತೆ ಪರೀಕ್ಷೆ ಮಾಡಿದರು. ನೂರಾರು ಮಂದಿ ತಪಾಸಣೆಯಲ್ಲಿ ಭಾಗಿಯಾಗಿದ್ದರು. ಸವಿತಾ ಎಂ.ಕೆ. ಭಟ್, ಲಯನ್ಸ್ ಕಾರ್ಯದರ್ಶಿ ಪ್ರಶಾಂತ್, ಕೃಷ್ಣಾನಂದ್, ಆಶಿಕ್ ಇತರರಿದ್ದರು.