ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಒಂದು ಸ್ಥಾನ ಕುಸಿದ ಶಿವಮೊಗ್ಗ

sslc result topper
ರಾಜ್ಯಕ್ಕೆ ಟಾಪರ್ ಆದ ವಿದ್ಯಾರ್ಥಿನಿ ನಿತ್ಯಾ ಕುಲಕರ್ಣಿ ಅವರಿಗೆ ತಾಯಿ ಕಲ್ಪನಾ ಎಂ.ಕುಲಕರ್ಣಿ ಸಿಹಿ ತಿನ್ನಿಸಿದರು. ರಾಮಕೃಷ್ಣ ಶಾಲೆ ಕಾರ್ಯದರ್ಶಿ ಶೋಭಾ ವೆಂಕಟರಮಣ, ವಿದ್ಯಾರ್ಥಿನಿ ತಂದೆ ಮುರಳೀಧರ ರಾವ್ ಕುಲಕರ್ಣಿ, ಶಿಕ್ಷಕ ಗಜೇಂದ್ರನಾಥ ಇದ್ದರು.
Published on

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯು ಕಳೆದ ಬಾರಿಗಿಂತ ಒಂದು ಸ್ಥಾನ ಕುಸಿತ ಕಂಡಿದ್ದು, ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 625ಕ್ಕೆ 625 ಅಂಕ ಪಡೆದ ರಾಜ್ಯದ 22 ವಿದ್ಯಾರ್ಥಿಗಳ ಪೈಕಿ ಶಿವಮೊಗ್ಗದ ಮೂವರು ಪ್ರಥಮ ಸ್ಥಾನ ಪಡೆದಿದ್ದಾರೆ. 624 ಅಂಕ ಪಡೆದ ನಾಲ್ವರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ಎಂಬುದು ವಿಶೇಷ.

ಕಳೆದ ವರ್ಷ ಶೇ. 88.67 ಫಲಿತಾಂಶದೊಂದಿಗೆ 3ನೇ ಸ್ಥಾನದಲ್ಲಿದ್ದ ಶಿವಮೊಗ್ಗ, ಈ ಬಾರಿ ಶೇ.82.30ರ ಫಲಿತಾಂಶದ ಮೂಲಕ ನಾಲ್ಕನೇ ಸ್ಥಾನಕ್ಕಿಳಿದಿದೆ. ಪರೀಕ್ಷೆ ಬರೆದಿದ್ದ 21,876 ವಿದ್ಯಾರ್ಥಿಗಳ ಪೈಕಿ 18,003 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2023ರಲ್ಲಿ ಶೇ. 84.23ರ ಫಲಿತಾಂಶದೊಂದಿಗೆ 29ನೇ ಸ್ಥಾನದಲ್ಲಿದ್ದ ಶಿವಮೊಗ್ಗ ಜಿಲ್ಲೆಯು 2024ರಲ್ಲಿ ಗಣನೀಯ ಸಾಧನೆ ಮಾಡಿತ್ತು.

2022ರಲ್ಲಿ ಶಿವಮೊಗ್ಗ 26ನೇ ಸ್ಥಾನ ಪಡೆದಿತ್ತು. 2021ರಲ್ಲಿ ಕರೊನಾ ಕಾರಣದಿಂದ ಎಸ್‌ಎಸ್‌ಎಲ್‌ಸಿಯ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣ ಮಾಡಲಾಗಿತ್ತು. 2020ರಲ್ಲಿ ಜಿಲ್ಲೆ 18ನೇ ಸ್ಥಾನದಲ್ಲಿತ್ತು. 2019ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಶೇ. 79.13 ಫಲಿತಾಂಶದೊಂದಿಗೆ ರಾಜ್ಯದಲ್ಲಿ 21ನೇ ಸ್ಥಾನದಲ್ಲಿತ್ತು. ಅದಕ್ಕೂ ಮುನ್ನ 2018ರಲ್ಲಿ 20ನೇ ಹಾಗೂ 2017ರಲ್ಲಿ 15ನೇ ಸ್ಥಾನ ಪಡೆದಿತ್ತು.

ಶೂನ್ಯ ಸಾಧನೆ ಒಂದೂ ಇಲ್ಲ: ಜಿಲ್ಲೆಯಲ್ಲಿ 84 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಒಂದು ಶಾಲೆ ಕೂಡ ಈ ಬಾರಿ ಶೂನ್ಯ ಸಾಧನೆ ಮಾಡಿಲ್ಲ ಎಂಬುದು ಗಮನಾರ್ಹ. 780 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ, 73 ವಿದ್ಯಾರ್ಥಿಗಳು 620ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶಿವಮೊಗ್ಗ ತಾಲೂಕಿನ ಮೂವರು ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net