

ತೀರ್ಥಹಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಪರ ಕಾರ್ಯಕ್ರಮಗಳು ಎಲ್ಲರಿಗೂ ತಲುಪುತ್ತಿರುವುದು ಗಮನಾರ್ಹ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ತನಿಕಲ್ ಗ್ರಾಮದಲ್ಲಿ ಧರ್ಮಸ್ಥಳ ಯೋಜನೆಯ ಗುಡ್ಡೆಕೊಪ್ಪ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ, ಯೋಜನೆ ಸದುದ್ದೇಶ ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಮಟ್ಟಕ್ಕೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಲಕ್ಷಾಂತರ ಕೋಟಿ ಜನರ ತೆರಿಗೆ ಹಣ ವಿನಿಯೋಗಿಸಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಬಡತನದ ರೇಖೆಯಿಂದ ಕೆಳಗಿರುವವರನ್ನು ಆರ್ಥಿಕ ಭದ್ರತೆ ಮತ್ತು ಸಬಲತೆಯೊಂದಿಗೆ ಮೇಲಕ್ಕೆ ತರುವಲ್ಲಿ ಸಾಧ್ಯವಾಗಿಲ್ಲ. ಸರ್ಕಾರಗಳಿಂದ ಇಂತಹ ಕಾರ್ಯ ನಡೆದಿದ್ದರೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳ ಅಗತ್ಯ ಇರಲಿಲ್ಲ. ಪ್ರಸ್ತುತ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಕಾರಗೊಳ್ಳುತ್ತಿವೆ ಎಂದರು.
ಮಂಜಪ್ಪ ಗರಗೇಶ್ವರ, ಬಾಂಡ್ಯ-ಕುಕ್ಕೆ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಪ್ರಭಾಕರ್, ಸದಸ್ಯ ಬಿ.ಕೆ.ವೆಂಕಟೇಶ್, ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಮುರಳೀಧರ ಶೆಟ್ಟಿ, ಉಪನ್ಯಾಸಕ ಡಾ. ಶ್ರೀಪತಿ ಹಳಗುಂದ, ಜನಜಾಗೃತಿ ವೇದಿಕೆಯ ಅಶೋಕಮೂರ್ತಿ, ಆಶಾ ಶ್ರೀನಿವಾಸ್, ಶಿಕ್ಷಕರಾದ ಕೆ.ಆರ್.ಮಂಜುನಾಥ್, ಮಧು, ಮಹೇಶ್, ಹರೀಶ್ ಇತರರಿದ್ದರು.