

ಭದ್ರಾವತಿ: ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಪ್ರತಿ ರೈತರು ತಾವು ಬೆಳೆದ ಅಡಕೆಯನ್ನು ಸಹಕಾರ ಸಂಘದಲ್ಲಿ ಹೆಚ್ಚು ಮಾರಾಟ ಮಾಡುವಂತೆ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘದ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ರಾಮ್ಕೋಸ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ 31ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸಂಘಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗುತ್ತಿದೆ. ಆದರೆ ಸದಸ್ಯತ್ವ ಪಡೆದ ರೈತರು ಸಂಸ್ಥೆಯಲ್ಲಿ ವಹಿವಾಟು ನಡೆಸುವುದು ಬಹಳ ಕಡಿಮೆ ಇದೆ. ಹೀಗಾದಲ್ಲಿ ಸಂಸ್ಥೆ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ಈ ವರ್ಷ ಖೇಣಿದಾರರು ಕಡಿಮೆ ತೂಕಕ್ಕೆ ಅಡಕೆ ಕೇಳುತ್ತಿರುವುದರಿಂದ ಅಡಕೆಯನ್ನು ಖೇಣಿದಾರರಿಗೆ ಕೊಡದೆ ಸಹಕಾರ ಸಂಘದಲ್ಲಿ ವ್ಯವಹಾರ ನಡೆಸಿ ಹೆಚ್ಚು ಲಾಭಾಂಶ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಲೆ ಮತ್ತಷ್ಟು ಏರಿಕೆ ಆಗುವುದೆಂದು ಕೆಲ ರೈತರು ಅಡಕೆಯನ್ನು ಐದಾರು ವರ್ಷವಾದರೂ ಗೋಡಾನ್ನಲ್ಲಿ ಶೇಖರಿಸುತ್ತಾರೆ. ಇನ್ನು ಮುಂದೆ ಸದಸ್ಯರ ಬೇಡಿಕೆಯಂತೆ ಈಗ 1 ವರ್ಷದವರೆಗೂ ಮಾತ್ರ ಬಾಡಿಗೆ ರಹಿತವಾಗಿ ಇಟ್ಟುಕೊಳ್ಳಲು ಅವಕಾಶ ನೀಡಲಾಗುವುದು. ಎಸ್ಎಸ್ಎಲ್ಸಿ, ಪಿಯುಸಿ ಮಾತ್ರವಲ್ಲದೆ ಸದಸ್ಯರ ಮಕ್ಕಳು ಸರ್ಕಾರಿ ಸೀಟು ಪಡೆದು ಉನ್ನತ ವ್ಯಾಸಂಗ ಮಾಡುತ್ತಿರುವವರು ಹಾಗೂ ಐಎಎಸ್, ಐಪಿಎಸ್ ವ್ಯಾಸಂಗ ಮಾಡಿರುವವರನ್ನೂ ಸಹ ಮುಂದಿನ ದಿನಗಳಲ್ಲಿ ಸನ್ಮಾಸಲಾಗುವುದು ಎಂದರು.
ಕಾರ್ಯದರ್ಶಿ ವಿರೂಪಾಕ್ಷಪ್ಪ ಮಾತನಾಡಿ, ಸಂಘವು 4,084 ಸದಸ್ಯರನ್ನು ಹೊಂದಿದ್ದು 228.03 ಲಕ್ಷ ರೂ. ಷೇರುಧನ ಹೊಂದಿದೆ. 4825.67 ಲಕ್ಷ ರೂ. ವಹಿವಾಟು ನಡೆಸಿ 128 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಯಶಸ್ವಿನಿ ಆರೋಗ್ಯ ಯೋಜನೆ, ಸದಸ್ಯರ ಕ್ಷೇಮನಿಧಿ, ಅಂತ್ಯ ಸಂಸ್ಕಾರ ಯೋಜನೆಯಂತಹ ಹಲವಾರು ಯೋಜನೆಗಳನ್ನು ಹೊಂದಿದೆ ಎಂದು ತಿಳಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಹೆಚ್ಚು ಅಡಕೆ ಮಾರಾಟ ಮಾಡಿದ ಸದಸ್ಯರಿಗೆ ಅಭಿನಂದಿಸಲಾಯಿತು. ಸಂಘದ ಉಪಾಧ್ಯಕ್ಷ ನೂರ್ಬೇಗ್, ನಿರ್ದೇಶಕರಾದ ಸಿ.ಹನುಮಂತಪ್ಪ, ಬಿ.ಜಿ.ಜಗದೀಶ್ ಗೌಡ, ಎ.ಎಂ.ಹರ್ಷ, ಎಚ್.ಎಸ್.ಸಂಜೀವಕುಮಾರ್, ಎ.ಜಿ.ವಿಜಯಕುಮಾರ್, ಟಿ.ಅಣ್ಣಪ್ಪ, ಎಚ್.ಎಸ್.ಮಂಜುನಾಥೇಶ್ವರ, ಎಂ.ಎಸ್.ಬಸವರಾಜಪ್ಪ ಇತರರಿದ್ದರು.