

ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯುವ ನಿರೀಕ್ಷೆಯೊಂದಿಗೆ ರಾಜ್ಯಾದ್ಯಂತ ಭರ್ಜರಿ ಪ್ರವಾಸ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಿಬಿಐ ಮತ್ತೊಂದು ಸುತ್ತಿನ ಶಾಕ್ ನೀಡುವ ಸಾಧ್ಯತೆ ಇದೆ.
ಡಿಕೆಶಿ ಅಕ್ರಮ ಆಸ್ತಿ ಸಂಬಂಧ ಚಾರ್ಜ್ಶೀಟ್ ಸಲ್ಲಿಸಲು ಸಿಬಿಐ ತಯಾರು ಮಾಡಿಕೊಂಡಿದ್ದು, ಮಾರ್ಚ್ ತಿಂಗಳಲ್ಲಿ ಸಲ್ಲಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಭದ್ರಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾನು ಏನು ಮಾಡಲಿ? ಚುನಾವಣೆಯ ಸಂದರ್ಭದಲ್ಲೇ ಇವೆಲ್ಲ ನಡೆಯುತ್ತಿದೆ. ನನ್ನ ಮಗಳಿಗೆ ಸಿಬಿಐಯವರು ನೋಟಿಸ್ ಕಳಿಸಿದ್ದಾರೆ. ಕಾಲೇಜು ಫೀಸ್ ಕಟ್ಟಿದ್ದೆಲ್ಲ ಕೇಳುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.
ಫೆ. 24ಕ್ಕೆ ನನಗೆ ಇಡಿಯವರು ವಿಚಾರಣೆಗೆ ಕರೆದಿದ್ದಾರೆ. ನಾನು ಪ್ರಜಾಧ್ವನಿ ಯಾತ್ರೆ ಮಾಡೋದಾ? ಅಥವಾ ಇಡಿಯವರ ಬಳಿ ಹೋಗೋದಾ? ಎಂದು ಅಸಮಧಾನ ಹೊರಹಾಕಿದ ಡಿಕೆಶಿ, ಕೇವಲ ನಮಗೆ ಮಾತ್ರ ಇಡಿಯವರು ಇರೋದು. ಆಡಳಿತ ಪಕ್ಷದವರಿಗೆ ಇಡಿ, ಸಿಬಿಐನವರು ಯಾರೂ ಇಲ್ಲ. ಇರಲಿ ನೋಡೋಣ ಏನಾಗುತ್ತೋ ಅಂತಾ ಎಂದರು.
ಕಾಂಗ್ರೆಸ್ ಟಿಕೆಟ್ ಸೆಲ್ ಮಾಡ್ತಾರೆ ಎಂಬ ಸಚಿವ ಅಶ್ವಥ್ ನಾರಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಯಾರದರೂ ಹೆಂಗಸರು ಮಾತನಾಡಿದರೆ ಉತ್ತರ ಕೊಡಬಹುದು ಅವರು ಗಂಡಸರು ಎಂದು ಟಾಂಗ್ ನೀಡಿದರು.
ಇಂದು ಮಲೆನಾಡಿಗೆ ಬಂದಿದ್ದೇವೆ. ಇಲ್ಲಿ ನಮ್ಮ ಒಬ್ಬರೆ ಶಾಸಕರು ಗೆದ್ದಿರುವುದು. ಈ ರಾಜ್ಯದಲ್ಲಿ ಬಿಜೆಪಿ ಅಡಳಿತದ ಡಬಲ್ ಇಂಜಿನ್ ಸರ್ಕಾರ ಇದೆ. ಆದರೆ, ಶಿವಮೊಗ್ಗದಲ್ಲಿ ಕಾರ್ಮಿಕರು, ರೈತರು ಹಾಗೂ ವ್ಯಾಪರಸ್ಥರು ಬದುಕುವ ಹಾಗಿಲ್ಲ. ನಾವು ಎಲ್ಲ ಕಾರ್ಖಾನೆಯನ್ನು ರಾಷ್ಟ್ರೀಕರಣ ಮಾಡಿದರೆ, ಇವರು ಖಾಸಗೀಕರಣ ಮಾಡುತ್ತಿದ್ದಾರೆ. ಇಲ್ಲಿ ಖಾಸಗಿಯವರು ಬರದೆ ಇರುವುದರಿಂದ ಮುಚ್ಚಲು ಮುಂದಾಗಿದ್ದಾರೆ. ಈ ಎರಡು ಕಾರ್ಖಾನೆ ಸರ್ಕಾರದ ಸುಪರ್ದಿಯಲ್ಲಿರಬೇಕು. ಅದನ್ನು ಮುಚ್ಚಬಾರದು ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರದ್ದು ಹಗರಣಗಳು ಪುಸ್ತಕನೇ ಬರೆಯಬಹುದು. ಅಡಿಕೆ ಬೆಳೆಯುವುದನ್ನು ರೈತರು ಬಿಡಿ ಅಂತಿದ್ದಾರೆ. ನಿವ್ಯಾಕೆ ರಾಜಕಾರಣ ಮಾಡ್ತೀರಾ ಬಿಟ್ಟು ಬಿಡಿ. ಈ ಸರ್ಕಾರ ರೈತರಿಗೆ ಬೆಂಬಲ ಬೆಲ ನೀಡಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಈ ಸರ್ಕಾರ ಇನ್ನೂ 50 ದಿನ ಮಾತ್ರ ಇರುತ್ತದೆ. ನಾವು 140 ಸೀಟ್ ಗೆಲ್ತೇವೆ ಮತ್ತು ಈ ಕಾರ್ಖಾನೆಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)