

ಸಾಗರ: ಭಾರತೀಯ ಜೀವ ವಿಮಾ ನಿಗಮದ ಯಶಸ್ಸಿಗೆ ಗ್ರಾಹಕರೇ ಕಾರಣ. ಗ್ರಾಹಕರೇ ನಮ್ಮ ಸಂಸ್ಥೆಯ ಜೀವಾಳ. 14 ಲಕ್ಷ ಜೀವ ವಿಮಾ ಪ್ರತಿನಿಧಿಗಳ ಶ್ರಮವು ನಿಗಮದ ಅಭಿವೃದ್ಧಿಗೆ ಕಾರಣ ಎಂದು ಜೀವ ವಿಮಾ ಸಾಗರ ಶಾಖೆ ಶಾಖಾಧಿಕಾರಿ ಡಿ.ಮಂಜುನಾಥ್ ಹೇಳಿದರು.
ನಗರದಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘದ ಸದಸ್ಯರ ಸಮಾವೇಶದಲ್ಲಿ ಮಾತನಾಡಿ, ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘವು ನಿಗಮದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ವಿಮಾ ಸಂಗ್ರಹ ಜತೆಗೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಹ ವಿಮಾ ಪ್ರತಿನಿಧಿಗಳ ಸಂಘ ತೊಡಗಿಸಿಕೊಂಡಿರುವುದು ಅಭಿನಂದಾರ್ಹ ಎಂದು ತಿಳಿಸಿದರು.
ಭಾರತೀಯ ಜೀವ ವಿಮಾ ನಿಗಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ನೆರವು ಸಾಲದ ರೂಪದಲ್ಲಿ ನೀಡಿದೆ. ಇದರಿಂದ ಅನೇಕ ಕೆಲಸಗಳು ದೇಶವ್ಯಾಪಿ ನಡೆಯುತ್ತಿವೆ. ಭಾರತೀಯ ಜೀವ ವಿಮಾ ಸಾಗರ ಶಾಖೆ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದರು.
ಸುದೀರ್ಘ ಕಾಲ ವಿಮಾ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ ಸಂಪತ್ಕುಮಾರ್, ಗಣಪತಿ ಭಟ್ ಇತರರನ್ನು ಸನ್ಮಾನಿಸಲಾಯಿತು. ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಡಿ.ಎಚ್.ಮನೋಹರ್, ಕಾರ್ಯದರ್ಶಿ ಶಾಂತೇಶಪ್ಪ, ಡಾ. ಗಜಾನನ ಹೆಗಡೆ, ಜಗದೀಶ್ ನಾಯ್ಕ ಉಪಸ್ಥಿತರಿದ್ದರು.