ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ

26 RPT 1
ಕೋಡೂರು ಬ್ಲಾಸಂ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಬಿ.ಜಿ.ಚಂದ್ರಮೌಳಿ, ಉಮೇಶ, ಸುಧಾಕರ ಇತರರಿದ್ದರು.
Published on

ರಿಪ್ಪನ್‌ಪೇಟೆ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಕೋಡೂರಿನ ಬ್ಲಾಸಂ ವಿದ್ಯಾಲಯದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಕ್ಕಳಿಗೆ ಪುರಾಣ ಪುಣ್ಯಕಥೆಗಳನ್ನು ಹೇಳುವ ಬದಲು ಪಾಲಕರು ದೃಶ್ಯ ಮಾಧ್ಯಮಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಪರಿಣಾಮ ಮಕ್ಕಳ ಮನಸ್ಸು ಕೂಡ ಹಿರಿಯರನ್ನು ಅನುಸರಿಸುತ್ತಿವೆ ಎಂದರು.

ಮಕ್ಕಳು ವಿಚಲಿತರಾಗುವ ಯಾವುದೇ ಟಿವಿ ಕಾರ್ಯಕ್ರಮಗಳನ್ನು ತೋರಿಸಬಾರದು. ಶಿಕ್ಷಣದ ಅವಧಿಯಲ್ಲಿ ಪಾಲಿಸಬೇಕಾದ ಜೀವನಶೈಲಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಉತ್ತಮ ಸಂಸ್ಕಾರ ದೊರೆತರೆ ದೇಶದ ಉತ್ತಮ ಪ್ರಜೆಯಾಗುತ್ತಾನೆ ಎಂದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಿದ್ದು, ಆಸಕ್ತಿಯಿಂದ ಕಲಿಯುವ ಎಲ್ಲರಿಗೂ ಉದ್ಯೋಗಾವಕಾಶಗಳು ದೊರೆಯುತ್ತಿವೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರೋತ್ಸಾಹಿಸಿದರೆ ಒಳ್ಳೆಯ ಜೀವನ ರೂಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರದ ಸಾಧಕರಾದ ವಿಜೇಂದ್ರ ಭಟ್, ಕೃಷ್ಣಪ್ಪ, ಯಲ್ಲಪ್ಪ ಶೆಟ್ಟಿ, ಸಾತ್ವಿಕ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾದಾಯಿನಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಗ್ರಾಪಂ ಅಧ್ಯಕ್ಷ ಉಮೇಶ, ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಶೇಖರಪ್ಪ, ಚಂದ್ರಕಲಾ, ಅನ್ನಪೂರ್ಣ, ಮುಖಂಡರಾದ ಪುಷ್ಪಾವತಿ, ಬಿ.ಎಸ್.ಸುರೇಶ್, ದಿವಾಕರ್, ಶೆಟ್ಟಿ, ವಿನಯ್ ಕುಮಾರ್, ನಟರಾಜ್, ಮುಖ್ಯಶಿಕ್ಷಕ ಪ್ರಕಾಶ, ಸುಧಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net