

ತ್ಯಾಗರ್ತಿ: ಪ್ರಸ್ತಕ ಸಾಲಿನಲ್ಲಿ ಅವಧಿಗೂ ಮುನ್ನ ಮುಂಗಾರು ಮಳೆ ಪ್ರಾರಂಭವಾಗಿದ್ದು, ಬೇಸಿಗೆಯಲ್ಲಿ ಬೆಳೆದ ಮೆಕ್ಕೆಜೋಳ ಹಾಗೂ ಭತ್ತದ ಬೆಳೆ ಸಂರಕ್ಷಣೆ ರೈತರಿಗೆ ಅನೇಕ ಸಂಕಷ್ಟಗಳನ್ನು ತಂದೊಡ್ಡಿದೆ.
ಕೆಲ ದಿನಗಳಿಂದ ನಿರಂತರ ಮಳೆಯಾಗಿದ್ದು, ಎರಡು ಮೂರು ದಿನಗಳಿಂದ ಮಳೆ ಕೊಂಚ ಬಿಡುವು ನೀಡಿದೆ. ಕೆಲ ಭಾಗಗಳಲ್ಲಿ ಮುಂಗಾರು ಕೃಷಿ ಚಟುವಟಿಕೆಗಳು ಬಿರುಸಾಗಿ ಸಾಗುತ್ತಿವೆ. ಅವಧಿ ಮುನ್ನ ಬಂದ ಮಳೆಯಿಂದ ಬೇಸಿಗೆ ಬೆಳೆ ಕೊಯ್ಲಿಗೆ ಬಂದರೂ ಕಟಾವು ಮಾಡಲಾಗದೆ ಪರಿತಪಿಸುವಂತಾಗಿದೆ.
ರೈತರು ಮಳೆ ಬಿಸಿಲಿನ ಕಣ್ಣಾಮುಚ್ಚಾಲೆ ನಡುವೆ ಹೆದ್ದಾರಿ ಹಾಗೂ ರಸ್ತೆ ಬದಿಯಲ್ಲಿ ಟಾರ್ಪಲ್ ಹಾಕಿಕೊಂಡು ಮೆಕ್ಕೆ ಜೋಳ ರಕ್ಷಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಮುಂಗಾರು ಬಿತ್ತನೆ ಹಾಗೂ ಹಿಂಗಾರು ಬೆಳೆ ಕಟಾವು ಒಂದೇ ಸಮಯದಲ್ಲಿ ಆಗುತ್ತಿದೆ.
ಹಿಂಗಾರು ಬೆಳೆ ಕೊಯ್ಲು ಮಾಡಿ ಸಂರಕ್ಷಣೆ ಮಾಡುವ ಸವಾಲು ರೈತರಿಗೆ ಎದುರಾಗಿದೆ. ಈ ರೀತಿ ಹವಾಮಾನ ವೈಪರೀತ್ಯ ಉಂಟಾದಾಗ ಬೆಳೆ ಸಂರಕ್ಷಣೆ ಮಾಡಿಕೊಳ್ಳಲು ಗ್ರಾಮೀಣ ಭಾಗದಲ್ಲಿ ವ್ಯವಸ್ಥೆಗಳಿಲ್ಲದೆ ಕೃಷಿಕರು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಮಳೆಗೆ ಸಿಲುಕಿದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಮಾರಾಟ ಮಾಡಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.