

ಸೊರಬ: ಭಗವಾನ್ ಶ್ರೀಕೃಷ್ಣ ನೀಡಿದ ಭಗವದ್ಗೀತೆ ಸಂದೇಶ ಮನುಕುಲಕ್ಕೆ ಮಾರ್ಗದರ್ಶನ ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
ಪಟ್ಟಣದ ಕಾನುಕೇರಿ ಮಠದ ಸಭಾಂಗಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ನೇತೃತ್ವದ ಹಿಂದು ಮಹಾಸಭಾ ಗಣಪತಿ ಉತ್ಸವ ಸಮಿತಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ, ವಿಹಿಂಪ ಸ್ಥಾಪನಾ ದಿನ ಪ್ರಯುಕ್ತ ಮಕ್ಕಳಿಗೆ ಕೃಷ್ಣ ವೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ದೇವರನ್ನು ಕಾಣುವುದು ನಾಡಿನ ಸಂಸ್ಕೃತಿ. ಪಾಲಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಧಾರ್ಮಿಕ ಅರಿವು ಬೆಳೆಸಬೇಕು. ಪ್ರಸ್ತುತ ಮಕ್ಕಳಲ್ಲಿ ಮಾನಸಿಕ ದೌರ್ಬಲ್ಯ ಹೆಚ್ಚುತ್ತಿದೆ. ಇದಕ್ಕೆಲ್ಲ ಪರಿಹಾರ ಎಂಬಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಭಗವದ್ಗೀತೆಯಲ್ಲಿ ಪ್ರತಿ ವಿಷಯ ಅಡಕವಾಗಿದೆ. ಶ್ರೀ ಕೃಷ್ಣನ ಆದರ್ಶ ಮತ್ತು ಧರ್ಮ ರಕ್ಷಣೆಗಾಗಿ ತೋರಿದ ಮಾರ್ಗ ಮಾದರಿ. ಸಂದೇಶಗಳು ಸಾರ್ವಕಾಲಿಕ ಸತ್ಯ ಎಂದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಧಾಕೃಷ್ಣ ವೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
ವಿಹಿಂಪ ತಾಲೂಕು ಅಧ್ಯಕ್ಷ ಜೆ.ನಿರಂಜನ್, ಜಿಲ್ಲಾ ಕಾರ್ಯದರ್ಶಿ ಎಚ್.ಎಲ್.ಚಂದನ್, ಬಜರಂಗದಳ ತಾಲೂಕು ಸಂಯೋಜಕ ಭರತ್, ರವಿ ಗುಡಿಗಾರ್, ಬಿ.ಶಶಿಕುಮಾರ್, ಜಿ.ಸಾತ್ವಿಕ್, ಮಾತೃ ಮಂಡಳಿಯ ವಿನಯಾ ಪ್ರಶಾಂತ್, ರೂಪಾ ಮಧುಕೇಶ್ವರ್ ಇತರರಿದ್ದರು.