

ತ್ಯಾಗರ್ತಿ: ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದು ಸವಾಲಿನ ಕೆಲಸ. ಶಿಕ್ಷಣ ಸಂಸ್ಥೆಯು ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡುವಂತಾಗಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಉಳ್ಳೂರಿನ ಶ್ರೀ ಸಿಗಂದೂರೇಶ್ವರಿ ಎಜುಕೇಷನ್ ಟ್ರಸ್ಟ್‌ನ ಸಾಗರ ಗಂಗೋತ್ರಿ ಕಾನೂನು ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ವೇದಿಕೆ, ಎನ್‌ಎಸ್‌ಎಸ್ ಘಟಕ, ಕಾನೂನು ನೆರವು ಕೇಂದ್ರ, ಯುವ ರೆಡ್‌ಕ್ರಾಸ್ ಘಟಕ ಹಾಗೂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾನೂನು ಪದವಿಗೆ ಸಂಸ್ಥೆಯು ಹೆಚ್ಚಿನ ಆದ್ಯತೆ ನೀಡುತ್ತಿದೆ. ಸಾಗರದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಿಸಿ ಕಾನೂನು, ಬಿ.ಇಡಿ ಹಾಗೂ ನರ್ಸಿಂಗ್ ಶಿಕ್ಷಣ ನೀಡುತ್ತಿದೆ. ಶೈಕ್ಷಣಿಕ ಕ್ಷೇತ್ರದ ಹಿರಿಯರ ಮಾರ್ಗದರ್ಶನ ನಮಗೆ ಸಿಕ್ಕಿದ್ದಿದ್ದರೆ ಇಂತಹ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ನಾನು ಸಹ ನಿರ್ಮಿಸಬಹುದಿತ್ತು ಎಂದು ತಿಳಿಸಿದರು.
ರಾಜ್ಯಪ್ರಶಸ್ತಿ ಪುರಸ್ಕೃತ ಚಿತ್ರಸಿರಿ ಎನ್.ಚಂದ್ರಶೇಖರ್ ಮಾತನಾಡಿ, ಧಾರ್ಮಿಕವಾಗಿ ನಡೆಯುವ ಎಲ್ಲ ಆಚರಣೆಗಳು ಸಹ ಒಂದು ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತವೆ. ಮನುಷ್ಯ ತಾನು ಮಾಡುವ ಎಲ್ಲ ಕಾರ್ಯಗಳನ್ನು ಇದೇ ದಾರಿಯಲ್ಲಿ ಮಾಡಬೇಕು ಎಂದು ಯೋಜನೆ ಹಾಕಿಕೊಳ್ಳುವುದು ಕೂಡ ಒಂದು ಅಲಿಖಿತ ಕಾನೂನು ಎಂದರು.
ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ಎನ್.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಕಾನೂನು ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಅಕ್ಷಯ್, ಹೇಮಂತರಾಜ್, ರಂಜಿತಾ ಅವರನ್ನು ಸನ್ಮಾನಿಸಲಾಯಿತು. ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಸ್ಥೆ ಅಧ್ಯಕ್ಷ ಬಿಳಿಗಲ್ಲೂರು ಕೃಷ್ಣಮೂರ್ತಿ, ಕಾನೂನು ಕಾಲೇಜಿನ ಪ್ರಾಚಾರ್ಯ ಬಿ.ಎಸ್.ವಿನಯ್, ಸಹಾಯಕ ಪ್ರಾಧ್ಯಾಪಕರಾದ ಜಿ.ಎಸ್.ಚಿದಾನಂದ್, ವಿನಾಯಕ ಟಿ. ಹೆಗಡೆ, ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಗೋಕುಲ್‌ರಾಜ್ ಇತರರಿದ್ದರು.