

ಶಿಕಾರಿಪುರ: ಅಧ್ಯಾತ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಪ್ರಜಾಪ್ರಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸೇವೆ ಶ್ಲಾಘನೀಯ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ, ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ರಕ್ತನಿಧಿ ಘಟಕ, ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಬಂಧುತ್ವ ದಿನ, ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿ, ನೂರು ಗಂಟೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಯೂನಿಟ್ ರಕ್ತವನ್ನು ಶಿಬಿರಗಳ ಮೂಲಕ ಸಂಗ್ರಹಿಸುವ ಗುರಿ ಹೊಂದಿರುವುದು ಸಮಾಜ ಸೇವೆಯ ಕಾಳಜಿಗೆ ಸಾಕ್ಷಿ ಎಂದು ತಿಳಿಸಿದರು.
ಶಿವಮೊಗ್ಗದ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಸಂಚಾಲಕಿ ಬಿ.ಕೆ.ಅನಸೂಯಕ್ಕ ಮಾತನಾಡಿ, ರಕ್ತದಾನ ಶ್ರೇಷ್ಠ ದಾನ. ಆರೋಗ್ಯವಂತರು ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ತಿಪ್ಪಾಯಿಕೊಪ್ಪ-ಸುರಗಿಹಳ್ಳಿ ಮಠದ ಶ್ರೀ ಮಹಂತ ಸ್ವಾಮೀಜಿ ಮಾತನಾಡಿ, ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ರಕ್ತದಾನ ಶಿಬಿರ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು.
ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಈಶ್ವರೀಯ ಬ್ರಹ್ಮಕುಮಾರಿ ವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ, ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಎನ್.ವಿ.ಈರೇಶ್, ಸುಧೀರ್, ಭೂಕಾಂತ್ ಮತ್ತಿತರರು ಇದ್ದರು. ಮೆಗ್ಗಾನ್ ಆಸ್ಪತ್ರೆ ವೈದ್ಯರು ಹಾಜರಿದ್ದರು. ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.