ಪಾಕ್‌ನಲ್ಲಿ ಹಿಂದು ಮಹಿಳೆ ಹತ್ಯೆ: ಶಿವಮೊಗ್ಗದಲ್ಲಿ ಪ್ರತಿಭಟನೆ

bjp
Published on

ಶಿವಮೊಗ್ಗ: ಪಾಕಿಸ್ತಾನದ ಸಿಂಝೋರ್‌ನಲ್ಲಿ 40 ವರ್ಷದ ಹಿಂದು ವಿಧವೆ ದಯಾಬೇಲ್ ಎಂಬುವವರ ಶಿರಚ್ಛೇದನ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ನಗರ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹತ್ಯೆ ಮಾಡಿದ ಬಳಿಕ ಆಕೆಯ ರುಂಡ, ಮುಂಡ ಬೇರ್ಪಡಿಸಿ ಗೋಧಿ ಬೆಳೆಯುವ ಹೊಲದಲ್ಲಿ ಎಸೆದಿದ್ದಾರೆ. ಕೆಲ ತಿಂಗಳ ಹಿಂದೆ ಸಿಂಧ್ ಪ್ರಾಂತ್ಯದಲ್ಲಿ ಹಿಂದು ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿ ಮೃತದೇಹವನ್ನು ರಸ್ತೆಗೆ ಎಸೆಯಲಾಗಿತ್ತು. ಪಾಕಿಸ್ತಾನದಲ್ಲಿ ಹಿಂದುಗಳ ಸುರಕ್ಷತೆ ಬಗ್ಗೆ ಕಳವಳ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಇಂತಹ ಕೃತ್ಯ ಎಸಗಿರುವವರನ್ನು ಪಾಕಿಸ್ತಾನ ಸರ್ಕಾರ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಪಾಕಿಸ್ತಾನದಲ್ಲಿ ಹಿಂದುಗಳ ರಕ್ಷಣೆ ಬಗ್ಗೆ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ನಗರಾಧ್ಯಕ್ಷೆ ಸುರೇಖಾ ಮುರುಳೀಧರ್, ಪ್ರಧಾನ ಕಾರ್ಯದರ್ಶಿ ಆರತಿ ಅ.ಮ.ಪ್ರಕಾಶ್, ಖಜಾಂಚಿ ರಶ್ಮಿ ಶಿವಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net