

ಶಿವಮೊಗ್ಗ: ನಗರದಲ್ಲಿ ಮೂರು ದಿನಗಳ ಕಾಲ ಆರ್‌ಎಸ್‌ಎಸ್‌ನ ವಿವಿಧ ಭೈಠಕ್‌ನಲ್ಲಿ ಮಾರ್ಗದರ್ಶನ ಮಾಡುತ್ತಿರುವ ಸರಸಂಘಚಾಲಕ ಮೋಹನ್ ಭಾಗವತ್ ಶುಕ್ರವಾರ ದಿವಂಗತ ದಿನೇಶ ಪೈ ನಿವಾಸ ಹಾಗೂ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು.
ಅ.21ರಂದು ಅನಾರೋಗ್ಯದಿಂದ ನಿಧನರಾಗಿದ್ದ ಪ್ರಾಂತ ಬೌದ್ಧಿಕ್ ಪ್ರಮುಖ್ ದಿನೇಶ್ ಪೈ ಅವರ ನಿವಾಸಕ್ಕೆ ಸಂಜೆ 5ಕ್ಕೆ ಆಗಮಿಸಿದ ಮೋಹನ್ ಭಾಗವತ್ ಸುಮಾರು 20 ನಿಮಿಷ ಪೈ ಕುಟುಂಬದ ಸದಸ್ಯರೊಂದಿಗಿದ್ದು ಅವರಿಗೆ ಸಾಂತ್ವನ ಹೇಳಿದರು. 20 ವರ್ಷದ ಹಿಂದೆ ದಿನೇಶ್ ಪೈ, ಪತ್ನಿ ಹಾಗೂ ಅವರ ಪುಟ್ಟ ಪುತ್ರ ರಾಮನಾಥ್ ಅವರೊಂದಿಗೆ ಮೋಹನ್ ಭಾಗವತ್ ಕೂಡಾ ಇದ್ದಿದ್ದ ಫೋಟೋವೊಂದು ಪೈ ಅವರ ಮನೆಯಲ್ಲಿ ಗಮನ ಸೆಳೆಯಿತು.
ಸಹಸರಕಾರ್ಯವಾಹ ಮುಕುಂದ, ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಪ್ರಾಂತ ಪ್ರಚಾರಕ ಪ್ರಮುಖ್ ಚಂದ್ರಬಾಬು, ಕ್ಷೇತ್ರೀಯ ಪ್ರಚಾರಕ ಸುಧೀರ್, ಪ್ರಾಂತ ಪ್ರಚಾರ ಪ್ರಮುಖ್ ಗುರುಪ್ರಸಾದ್ ಮುಂತಾದವರು ಮೋಹನ್ ಭಾಗವತ್ ಅವರೊಂದಿಗಿದ್ದರು. ದಿವಂಗತ ದಿನೇಶ್ ಪೈ ಪತ್ನಿ ಪೂರ್ಣಿಮಾ, ಪುತ್ರ ರಾಮನಾಥ, ಪೈ ಅವರ ಸಹೋದರರು ಹಾಗೂ ಕುಟುಂಬಸ್ಥರು ಈ ಸಂದರ್ಭದಲ್ಲಿದ್ದರು.
ಭಾಗವತ್ ಭೇಟಿ ಹಿನ್ನೆಲೆಯಲ್ಲಿ ಎಎ ವೃತ್ತದಿಂದ ಓಟಿ ರಸ್ತೆಯ ಸುಮಾರು 150 ಮೀಟರ್ ಮಾರ್ಗದಲ್ಲಿ ಸುಮಾರು ಅರ್ಧ ತಾಸು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ನಾಗರಿಕರ ಸಂಚಾರಕ್ಕೂ ಕಡಿವಾಣ ಹಾಕಲಾಗಿತ್ತು. ಮೋಹನ್ ಭಾಗವತ್ ಅವರನ್ನು ನೋಡಲು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರು.
ಕೋಟೆ ದೇವಸ್ಥಾನಕ್ಕೆ ಭೇಟಿ
ದಿನೇಶ್ ಪೈ ಅವರ ನಿವಾಸದಿಂದ ತೆರಳಿದ ಮೋಹನ್ ಭಾಗವತ್ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅರ್ಚಕರಾದ ಅನಂತರಾಮು, ರಾಮಪ್ರಸಾದ್ ಮುಂತಾದವರಿದ್ದರು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅರ್ಚಕರು ಮೋಹನ್ ಭಾಗವತ್ ಅವರಿಗೆ ಪ್ರಸಾದ ನೀಡಿ ಆಶೀರ್ವದಿಸಿದರು. ಅರ್ಚಕ ಕುಟುಂಬದವರು ಭಾಗವತ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಆರ್‌ಎಸ್‌ಎಸ್ ಪ್ರಮುಖರು ಈ ಸಂದರ್ಭದಲ್ಲಿದ್ದರು.