

ಸಾಗರ: ಆರೋಗ್ಯ ಕಾಳಜಿ ಬಹುತೇಕರಲ್ಲಿ ಕಡಿಮೆ ಆಗುತ್ತಿದ್ದು, ಕಾಯಿಲೆ ಬಂದ ನಂತರ ಯೋಚಿಸುವುದಕ್ಕಿಂತ ರೋಗ ಬಾರದಂತೆ ಮುಂಜಾಗ್ರತೆ ವಹಿಸುವುದು ಅವಶ್ಯ ಎಂದು ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಹೇಳಿದರು.
ಸಾಗರ ಕರಾಟೆ ಸಂಸ್ಥೆಯಿಂದ ಆಯೋಜಿಸಿದ್ದ ಏರೋಬಿಕ್ಸ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ಒತ್ತಡದ ಜೀವನಶೈಲಿಯಿಂದ ಆರೋಗ್ಯದ ಬಗ್ಗೆ ಗಮನ ನೀಡುವುದು ಕಡಿಮೆಯಾಗುತ್ತಿದೆ. ದೈನಂದಿನ ಆರೋಗ್ಯಪೂರ್ಣ ಚಟುವಟಿಕೆಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ವ್ಯಾಯಾಮ, ವಾಯು ವಿಹಾರ, ಕರಾಟೆ, ಏರೋಬಿಕ್ಸ್ ಇತರ ಹವ್ಯಾಸ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ದೇಹವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳದಿರುವುದು ಇದಕ್ಕೆ ಕಾರಣ. ದೈಹಿಕ ಕ್ಷಮತೆ ಇದ್ದರೆ ಯಾವ ಕಾಯಿಲೆಯೂ ಮನುಷ್ಯನ ಬಳಿ ಸುಳಿಯುವುದಿಲ್ಲ ಎಂದರು.
ಸಂಸ್ಥೆ ಅಧ್ಯಕ್ಷ ಶಿಯಾನ್ ಪಂಚಪ್ಪ ಮಾತನಾಡಿ, ಜನರಲ್ಲಿ ಆರೋಗ್ಯ ಅರಿವು ಮೂಡಿಸಲು ಅಗತ್ಯ ತರಬೇತಿ ಶಿಬಿರ ನಡೆಸುತ್ತೇವೆ. ಏರೋಬಿಕ್ಸ್ ಹಾಡಿನೊಂದಿಗೆ ವ್ಯಾಯಾಮ ಮಾಡಿ ಆರೋಗ್ಯಪೂರ್ಣ ದೇಹ ಹೊಂದಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು. ತರಬೇತುದಾರ ನವೀನ್ ಫರ್ನಾಂಡೀಸ್, ಪ್ರಮುಖರಾದ ಚಂದ್ರಶೇಖರ್, ರಾಘವೇಂದ್ರ, ಕಿರಣ್, ಶೇಷಾಚಲ ಇತರರಿದ್ದರು.