

ಹೊಸನಗರ: ಸ್ವಸ್ಥ ಸಮಾಜದ ನಿರ್ಮಾಣ, ಸಮಾಜದ ಒಳಿತಿಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಶ್ರಮಿಸುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಹೊಸನಗರದ ಗಾಯತ್ರಿ ಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ 1,897ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮದ್ಯ ವ್ಯಸನ ಸಮಾಜಕ್ಕೆ ಶಾಪವಾಗಿದೆ. ಇದನ್ನು ಮನಗಂಡ ಧರ್ಮಾಧಿಕಾರಿಗಳು ಮದ್ಯವರ್ಜನ ಶಿಬಿರದ ಮೂಲಕ ನಾಡಿನಾದ್ಯಂತ ಜನರನ್ನು ದುಶ್ಚಟಗಳಿಂದ ದೂರ ತಂದು ಸಮಾಜಕ್ಕೆ ಮಾದರಿ ಆಗಿದ್ದಾರೆ. ಒಬ್ಬ ಮದ್ಯವ್ಯಸನದಿಂದ ಮುಕ್ತನಾದರೆ ಒಂದು ಕುಟುಂಬ ಉಳಿದಂತೆ, ಇಂತಹ ಶಿಬಿರಗಳಿಂದ ಸಹಸ್ರಾರು ಕುಟುಂಬಗಳು ಹೊಸ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.
ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಒಂದು ಉತ್ತಮ ಸಂಘಟನೆ ಸಮಾಜ ಬದಲಿಸಬಹುದು. ಈ ಕೆಲಸವನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಮಾಡಿ ತೋರಿಸಿದ್ದಾರೆ. ಜನರನ್ನು ವ್ಯಸನದಿಂದ ಮುಕ್ತ ಮಾಡುವುದು ಕ್ರಾಂತಿಕಾರಿ ಕೆಲಸ ಎಂದರು.
ಸಮಿತಿ ಅಧ್ಯಕ್ಷ ಎನ್.ಆರ್.ದೇವಾನಂದ್, ಪ್ರಾದೇಶಿಕ ಅಧಿಕಾರಿ ಗೀತಾ, ಉದಯಶೆಟ್ಟಿ, ಮೋಹನ್ ಶೆಟ್ಟಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ್, ಯೋಜನಾಧಿಕಾರಿ ಆರ್.ಪ್ರದೀಪ ಇದ್ದರು.