

ಶಿರಾಳಕೊಪ್ಪ: ಮನುಷ್ಯ ಧರ್ಮದ ಪರಿಪಾಲನೆ ಮಾಡದಿದ್ದರೆ ಯಾವ ಪ್ರಯೋಜನವೂ ಇಲ್ಲ. ಜೀವನದಲ್ಲಿ ಯಶಸ್ಸು ಗಳಿಸಲು ಕ್ರಿಯಾಶೀಲ ಆಲೋಚನೆ ಮುಖ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣ ಸಮೀಪದ ತಪೋಕ್ಷೇತ್ರ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರು ಪರಂಪರೆ ಜಾತ್ರೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ದಶಧರ್ಮ ಸೂತ್ರಗಳನ್ನು ಬೋಧಿಸಿದ್ದು, ಪ್ರತಿಯೊಬ್ಬರಿಗೂ ಮಾನ್ಯವಾಗಿವೆ. ಮಠಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿದ್ದು, ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಬೆಳೆಸುವ ಕಾರ್ಯ ಮಾಡುತ್ತಿವೆ. ವೀರಶೈವ ಧರ್ಮ ಮಾನವ ಧರ್ಮ ಎತ್ತಿ ಹಿಡಿದಿದೆ. ಇದರಲ್ಲಿರುವ ಧರ್ಮ ಚಿಂತನೆಗಳು ಎಲ್ಲರ ಉನ್ನತಿಗಾಗಿವೆ ಎಂದು ತಿಳಿಸಿದರು.
ಗೌರಿಗದ್ದೆ ಅವದೂತ ವಿನಯ್ ಗುರೂಜಿ, ಕಡೇನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ, ಚನ್ನಗಿರಿ ಡಾ. ಕೇದಾರಲಿಂಗ ಶ್ರೀಗಳು, ಜಕ್ಕಲಿ-ಹಾರನಹಳ್ಳಿ ವಿಶ್ವಾರಾಧ್ಯ ಶ್ರೀಗಳು, ಹಾರನಹಳ್ಳಿ ಶಿವಯೋಗಿ ಶ್ರೀಗಳು, ನಾಗವಂದದ ಶಿವಯೋಗಿ ಶಿವಾನಂದ ಶ್ರೀಗಳು, ನಂದೀಪುರದ ನಂದೀಶ್ವರ ಶ್ರೀಗಳು, ಗೋವಿನಕೋವಿ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿ, ಲಿಂಗಸುಗೂರಿನ ಮಾತಾ ಮಾಣಿಕ್ಕೇಶ್ವರಿ ಆಶ್ರಮದ ನಂದಿಕೇಶ್ವರಿ ಅಮ್ಮನವರು ಉಪಸ್ಥಿತರಿದ್ದರು.
ಅಹಂಕಾರ ತೊರೆದು ಗುರುವಿಗೆ ಶರಣಾಗಿ: ಮನುಷ್ಯ ತನ್ನಲ್ಲಿರುವ ಅಹಂಕಾರ ತೊರೆದು ಶರಣಾದಾಗ ಮಾತ್ರ ಗುರುವಿನ ಆಶೀರ್ವಾದ ದೊರೆಯುವುದು ಎಂದು ಗೌರಿಗದ್ದೆ ಅವದೂತ ವಿನಯ ಗುರೂಜಿ ಹೇಳಿದರು. ಇಂದು ಸಂಸ್ಕಾರ ಏನಾದರೂ ಉಳಿದಿದ್ದರೆ ಅದು ಮಠಗಳಿಂದ ಮಾತ್ರ. ನಾವು ರೇಣುಕರನ್ನು ನೋಡಿಲ್ಲ. ಆದರೆ ಶ್ರೀ ರಂಭಾಪುರಿ ಜಗದ್ಗುರುಗಳಲ್ಲಿ ರೇಣುಕರನ್ನು ಕಾಣುತ್ತಿದ್ದೇವೆ. ಐವರು ಪಂಚ ಪೀಠಾಧೀಶ್ವರರ ದರ್ಶನ ಮಾಡಿದರೆ ಕುಂಭಮೇಳದಲ್ಲಿ ಸಿಗುವ ಪುಣ್ಯ ಇಲ್ಲಿಯೇ ಪ್ರಾಪ್ತಿಯಾಗುತ್ತದೆ. ಕುಂಭಮೇಳದ ಕಾಲ್ತುಳಿತ ಮಿತಿ ಮೀರಿದ ಜನಸಂದಣೆಯಿಂದ ದುರಂತ ಸಂಭವಿಸಿರುವುದು ತುಂಬಾ ನೋವು ತಂದಿದೆ ಎಂದರು.
ಪ್ರಥಮ ದರ್ಜೆ ಗುತ್ತಿಗೆದಾರ ಪಿ.ಎಸ್.ದೇವೇಂದ್ರಪ್ಪ ಅವರಿಗೆ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಳಗ್ಗೆ ಶ್ರೀ ದುರ್ಗಾ ಸಪ್ತಶತಿ ಪಾರಾಯಣ, ಸ್ವಯಂವರ ಪಾರ್ವತಿ ಯಾಗ ಜರುಗಿದವು. ಸಮಾರಂಭದ ನಂತರ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿಗೆ ಭವ್ಯ ಬೆಳಕಿನ ವಿಶೇಷ ಆರತಿ ಕಾರ್ಯಕ್ರಮ ಜರುಗಿತು. ನಂತರ ದನ ಕಾಯೋರ ದೊಡ್ಡಾಟ ನಾಟಕ ಪ್ರದರ್ಶನಗೊಂಡಿತು.
ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ನಿರಂತರವಾಗಿ ಸಂಚರಿಸಿ ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಂಭಾಪುರಿ ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಬಿ.ವೈ.ರಾಘವೇಂದ್ರ ಲೋಕಸಭಾ ಸದಸ್ಯ
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಶಿಕಾರಿಪುರದ ಕೆ.ಎಸ್.ಗುರುಮೂರ್ತಿ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸುಧೀರ ಮಾರವಳ್ಳಿ, ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಕೊಣಂದೂರು ಕೆ.ಆರ್.ಪ್ರಕಾಶ್, ಶಿವಕುಮಾರ ತಿಪ್ಪಶೆಟ್ಟಿ, ಬಸವರಾಜಪ್ಪ ಚನ್ನಳ್ಳೇರ, ವೀರೇಶ ವಡಕಪ್ಪಳಿ, ಅವಿನಾಶ, ಪಾಲಾಕ್ಷಗೌಡ ಪಾಟೀಲ, ನಾಗರಾಜ ಹುಲ್ಲಿನಕೊಪ್ಪ, ಶ್ವೇತಾ ಕಡೇನಂದಿಹಳ್ಳಿ, ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಇತರರಿದ್ದರು.