

ಕಾರ್ಗಲ್: ಮನೋನಿಯಂತ್ರಣದಿಂದ ಆತ್ಮಶುದ್ಧಿ ಮಾಡಿಕೊಂಡಲ್ಲಿ ಮಹಾತ್ಮರಾಗಲು ಸಾಧ್ಯ ಎಂದು ಸೋಂದಾ ಶ್ರೀ ಸಾಧ್ವಿ ದಿಗಂಬರ ಜೈನಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.
ಸಮೀಪದ ಬಿದರೂರು ಶ್ರೀ ವರ್ಧಮಾನ ದಿಗಂಬರ ಸ್ವಾಮಿ ಜೈನ ಬಸದಿಯಲ್ಲಿ ಏರ್ಪಡಿಸಿದ್ದ ದಶಲಕ್ಷಣ ಮಹಾಪರ್ವ ಪೂಜಾ ಕಾರ್ಯಕ್ರಮದ ಮೂರನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕಪಟ, ಮೋಸಗಳಿಲ್ಲದೆ ಸರಳ ವ್ಯಕ್ತಿತ್ವ ಹೊಂದುವುದು ದಶಲಕ್ಷಣದ ಮೂರನೇ ಪ್ರಮುಖ ಧರ್ಮ ಎಂದು ತಿಳಿಸಿದರು.
ಕಪಟ ಸ್ವಭಾವ ಕಠೋರವಾಗಿರುತ್ತದೆ. ಅಸತ್ಯ, ನಿಷ್ಕರುಣೆ ಮತ್ತು ವಿಶ್ವಾಸಘಾತ ಮೊದಲಾದ ದುರ್ಗುಣಗಳು ನೆಲೆಗೊಂಡಿರುತ್ತವೆ. ಈ ಗುಣಗಳು ಆತ್ಮನು ಸಂಸಾರದಲ್ಲಿ ಅನಂತ ಕಾಲದವರೆಗೆ ಭ್ರಮಣೆ ಮಾಡುತ್ತದೆ. ಮನ, ವಚನ ಮತ್ತು ಕಾಯಗಳ ಪ್ರವೃತ್ತಿಯಲ್ಲಿ ಸರಳ ಸ್ವಭಾವವನ್ನೇ ಹೊಂದಿರುವುದು ಸದ್ಗತಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಜೈನ ಸಮಾಜದ ತಾಲೂಕು ಅಧ್ಯಕ್ಷ ಎಂ.ಪಿ.ಲೋಕರಾಜ್, ಶ್ರೀ ವರ್ಧಮಾನ ಸ್ವಾಮಿ ದಿಗಂಬರ ಜೈನ ಬಸದಿ ಸಮಿತಿ ಅಧ್ಯಕ್ಷ ಶಾಂತರಾಜ್, ಕಾರ್ಯದರ್ಶಿ ಲೋಕರಾಜ್, ಮಾಜಿ ಅಧ್ಯಕ್ಷೆ ಬಬಿತಾ ಪ್ರೇಮಕುಮಾರ್, ಮಾಜಿ ಕಾರ್ಯದರ್ಶಿ ಪ್ರದೀಪ್, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಷ್ಠಾಚಾರ್ಯ ಮೋಹನ್‌ಕುಮಾರ್ ಇಂದ್ರ, ಪುರೋಹಿತರಾದ ಸತ್ಯೇಂದ್ರ ಇಂದ್ರ, ವಿದ್ಯಾಧರ ಇಂದ್ರ, ಪದ್ಮರಾಜ ಇಂದ್ರ ಹಾಗೂ ಆದರ್ಶ ಇಂದ್ರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.