

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರ, ಬಿಜೆಪಿ ನಾಯಕ ಕೆ.ಅಣ್ಣಾಮಲೈ ಮೂರು ಲೋಕಸಭೆ ಕ್ಷೇತ್ರಗಳಲ್ಲಿ ಭರ್ಜರಿ ರೋಡ್ ಶೋ ಸೋಮವಾರ ನಡೆಸಿ, ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಜನರ ಬೆಂಬಲಕ್ಕೆ ಮನವಿ ಮಾಡಿದರು.
ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಪರವಾಗಿ ಡಿ.ಕೆ.ಶಿವಕುಮಾರ್ ಮತ ಬೇಟೆಗೆ ಇಳಿದರು. ಬಾಗಲಗುಂಟೆ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ಶುರುವಾಯಿತು. ಮಲ್ಲಸಂದ್ರ, ಪೈಪ್‌ಲೈನ್, ದಾಸರಹಳ್ಳಿ, ಕೆರೆ ಮುಖ್ಯ ರಸ್ತೆ ಮಾರ್ಗದಲ್ಲಿ ಸಾಗಿತು.
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಚಿಕ್ಕಮಗಳೂರಿನಿಂದ ವಲಸೆ ಬಂದವರಲ್ಲ. ಇಲ್ಲೇ ಹುಟ್ಟಿ ಬೆಳೆದು, ಜನರ ನಾಡಿಮಿಡಿತ ಬಲ್ಲವರಾಗಿದ್ದಾರೆ ಎಂದರು.
ರಾಜ್ಯ ಸರ್ಕಾರ ಐದು ಮಹತ್ವದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. 10 ತಿಂಗಳ ಅವಧಿಯಲ್ಲಿ ಈ ಯೋಜನೆ ಲಾನುಭವಿಗಳ ಆರ್ಥಿಕತೆ ಸುಧಾರಿಸಿದೆ. ರಾಹುಲ್ ಗಾಂಧಿಯವರು ದೇಶಮಟ್ಟದಲ್ಲಿ ೋಷಿಸಿರುವ ಗ್ಯಾರಂಟಿಗಳು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆ ಮನೆಗೆ ತಲುಪಲಿವೆ ಎಂಬ ಭರವಸೆ ನೀಡಿದರು.
ನಿವೃತ್ತ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ತಮಿಳುನಾಡಿನ ತಮ್ಮ ಜವಾಬ್ದಾರಿ ಮುಗಿಸಿಕೊಂಡು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದ ಅಖಾಡಕ್ಕೆ ಸೋಮವಾರ ಧುಮುಕಿದರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ತೇಜಸ್ವಿಸೂರ್ಯ ಪರವಾಗಿ ಜಯನಗರ, ಬಿಟಿಎಂ ಲೇಔಟ್, ಚಿಕ್ಕಪೇಟೆ, ಬೆಂಗಳೂರು ಕೇಂದ್ರದ ಪಿ.ಸಿ.ಮೋಹನ್ ಪರವಾಗಿ ಎಲ್‌ಆರ್ ನಗರ, ಹೊಸೂರು ರಸ್ತೆ, ಮಾರ್ಕಮ್ ರಸ್ತೆ ಜಂಕ್ಷನ್‌ನಲ್ಲಿ ಅಬ್ಬರದ ರೋಡ್ ಶೋ ನಡೆಸಿದರು.
ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಡಾ.ಸಿ.ಎನ್.ಮಂಜುನಾಥ ಪರವಾಗಿ ರಾಜರಾಜೇಶ್ವರಿ ನಗರದ ಪ್ರೆಸ್ಟೀಜ್ ಟೆಂಪಲ್ ಬೆಲ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಮತಯಾಚಿಸಿದರು.
ಇದೇ ವೇಳೆ ಕೆ.ಅಣ್ಣಾಮಲೈ ಮಾತನಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರ, ತಮಿಳುನಾಡಿನ ಡಿಎಂಕೆ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳು. ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ಹಾಗೂ ಸಮಾಜಘಾತುಕ ಶಕ್ತಿಗಳ ಪೋಷಣೆಯು ಈ ಪಕ್ಷಗಳ ಕಾರ್ಯಸೂಚಿಯಾಗಿದೆ ಎಂದು ವಾಗ್ದಾಳಿ ಮಾಡಿದರು.
ದಶಕದ ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಹೊಸ ಆಯಾಮ ನೀಡಿದ್ದಾರೆ. ಎಲ್ಲರ ಏಳಿಗೆಗೆ ಶ್ರಮಿಸುವ ಜತೆಗೆ ಜಾಗತಿಕವಾಗಿ ದೇಶದ ಗೌರವ-ಘನತೆ ಹೆಚ್ಚಿಸಿದ್ದಾರೆ. ವಿಕಸಿತ ಭಾರತದ ಅವರ ಸಂಕಲ್ಪವು ದೇಶದ ಜನರನ್ನು ಸೆಳೆದಿದೆ ಎಂದರು.