

ಚಿಕ್ಕಬಳ್ಳಾಪುರ: ಮೈಸೂರಿನಿಂದ ಕೊಯಮತ್ತೂರಿನ ಈಶ ಯೋಗ ಕೇಂದ್ರಕ್ಕೆ ಸಾಗುತ್ತಿರುವ ಶಿವ ಯಾತ್ರೆ ರಥವು ಚಿಕ್ಕಬಳ್ಳಾಪುರದ ಈಶ ಸದ್ಗುರು ಸನ್ನಿಧಿಗೆ ಶುಕ್ರವಾರ ಆಗಮಿಸಿತು.ದಕ್ಷಿಣದ ಕೈಲಾಸ ಎಂತಲೇ ಕರೆಯಲಾಗಿರುವ ವೆಲ್ಲಿಯಂಗಿರಿ ಪರ್ವತದ ಕಡೆಗೆ ಬಹು ನಿರೀಕ್ಷಿತ 37 ದಿನಗಳ ಶಿವಯಾತ್ರೆಯನ್ನು ಈಶ ಫೌಂಡೇಷನ್ ಕೈಗೊಂಡಿದೆ. ಇದರಡಿ 650 ಕಿ.ಮೀ ಸಂಚರಿಸಲಾಗುತ್ತಿದೆ. ಮಹಾಶಿವರಾತ್ರಿ ಆಚರಣೆಗೆ 2 ದಿನಗಳ ಮೊದಲು (ಫೆ.24) ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರಕ್ಕೆ ರಥವು ತೆರಳಲಿದ್ದು ವಿಶೇಷ ಪೂಜೆ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಳ್ಳುತ್ತದೆ.
*ವಿಶೇಷ ಕಾರ್ಯಕ್ರಮ*
ವಿಶಿಷ್ಟವಾದ ಆಧ್ಯಾತ್ಮಿಕ ಯಾತ್ರೆ ಪ್ರಕ್ರಿಯೆಯು ಚಿಕ್ಕಬಳ್ಳಾಪುರದಲ್ಲಿ ಶನಿವಾರ ಬೆಳಿಗ್ಗೆ 6:20 ಕ್ಕೆ ಗುರು ಪೂಜೆಯೊಂದಿಗೆ ಪ್ರಾರಂಭವಾಗಲಿದ್ದು ಬೆಳಿಗ್ಗೆ 8 ಕ್ಕೆ ಇರುಮುಡಿ ಮೆರವಣಿಗೆ, ಯಾತ್ರೆಯು ಎತ್ತಿನ ಬಂಡಿ ಮತ್ತು ಪಾದಯಾತ್ರೆಯೊಂದಿಗೆ ಚಿಕ್ಕಬಳ್ಳಾಪುರದ ಸುತ್ತಮುತ್ತಲಿನ ವಿವಿಧ ಪವಿತ್ರ ದೇವಾಲಯಗಳು,ಪ್ರಮುಖ ಸ್ಥಳಗಳಿಗೆ ಸಂಚರಿಸಲಿದೆ.
*ಶಿವ ಯಾತ್ರೆ ಸಂಚಾರ ಮಾರ್ಗ*
ಮೈಸೂರಿನಿಂದ ಶ್ರೀರಂಗಪಟ್ಟಣ, ಅರೆಕೆರೆ, ಮಂಡ್ಯ, ಕೆ.ಹೊನ್ನಲಗೆರೆ, ತಗಚಗೆರೆ, ಚಿಕ್ಕೆಗೌಡನದೊಡ್ಡಿ, ಹುಲುವೇನಹಳ್ಳಿ, ಆಲೂರು, ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಮೂಲಕ ಯಾತ್ರೆಯು ಜಿಲ್ಲೆಯನ್ನು ಪ್ರವೇಶಿಸಿದೆ.
ಬಳಿಕ ಪ್ರಮುಖ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯಲ್ಲಿ ಸಾಗಿ ಶುಕ್ರವಾರ ರಾತ್ರಿ 6 ಕ್ಕೆ ಈಶ ಆದಿಯೋಗಿ ಧ್ಯಾನ ಕೇಂದ್ರಕ್ಕೆ ಬಂದಿದ್ದು ಶನಿವಾರ ಮತ್ತೆ ಸಂಚಾರ ಪ್ರಾರಂಭವಾಗಲಿದೆ. ನಂಬಿಕೆ, ಭಕ್ತಿ ಮತ್ತು ಏಕತೆಯ ಒಂದು ಅಸಾಮಾನ್ಯ ಉದಾಹರಣೆಯ ಸಂಕೇತದ ಶಿವಯಾತ್ರೆಯಲ್ಲಿ ಈಶ ಸ್ವಯಂಸೇವಕರು ಸೇರಿದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.