

| ರಾಘವ ಶರ್ಮ ನಿಡ್ಲೆ ನವದೆಹಲಿ
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠಕ್ಕೆ 16 ವರ್ಷದ ವಟು ಒಬ್ಬರನ್ನು ಮಠಾಧಿಪತಿಯಾಗಿ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಶ್ರೀಗಳು ನೇಮಿಸಿ ಪಟ್ಟಾಭಿಷೇಕ ಮಾಡಿರುವುದು ಹೈಕೋರ್ಟ್ ಮೆಟ್ಟಿಲೇರಿದೆ.
ಇಲ್ಲಿ 2 ಪ್ರಶ್ನೆಗಳು ಉದ್ಭವವಾಗಿವೆ. ಮೊದಲನೆಯದ್ದು, ಸೋದೆಮಠದ ಸ್ವಾಮಿಗಳಿಗೆ ಶೀರೂರು ಮಠಕ್ಕೆ ಮಠಾಧಿಪತಿಗಳನ್ನು ನೇಮಿಸುವ ಅಧಿಕಾರ ಇದೆಯೇ? ಎರಡನೇಯದ್ದು, 16 ವರ್ಷದ ವಟುವೊಬ್ಬರನ್ನು ಮಠಾಧಿಪತಿಗಳಾಗಿ ನೇಮಿಸಿರುವುದು ಕಾನೂನಾತ್ಮಕವಾಗಿ ಸರಿಯೇ ಎಂಬುದು.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ನಿಡ್ಲೆಯ ಅನಿರುದ್ಧ ಸರಳತ್ತಾಯರಿಗೆ ಸೋದೆ ವಾದಿರಾಜ ಮಠದ ಸ್ವಾಮೀಜಿ ಒತ್ತಾಯಪೂರ್ವಕವಾಗಿ ದೀಕ್ಷೆ ನೀಡಿದ್ದಾರೆ ಮತ್ತು ಅವರಿಗೆ ಇಂಥದ್ದೊಂದು ತೀರ್ಮಾನ ಕೈಗೊಳ್ಳುವ ಅಧಿಕಾರವಿಲ್ಲ ಎಂದು ಶೀರೂರು ಮಠದ ನಿಕಟಪೂರ್ವ ಯತಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಹೋದರ ಲಾತವ್ಯ ಆಚಾರ್ಯ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ತಕರಾರು ತೆಗೆದಿದ್ದಾರೆ. ಆದರೆ, ಉಡುಪಿ ಅಷ್ಟ ಮಠಗಳಲ್ಲಿ ಹಲವು ಬಾರಿ ಬಾಲ ಶಿಷ್ಯಂದಿರನ್ನು ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿರುವ ನಿದರ್ಶನಗಳಿರುವುದರಿಂದ ಮತ್ತು ಸುಪ್ರೀಂಕೋರ್ಟ್ನ 7 ಸದಸ್ಯರ ಪೀಠದ ತೀರ್ಪಿನ ಪ್ರಕಾರ, ಉಡುಪಿ ಮಠಗಳ ಅಗತ್ಯ ಧಾರ್ವಿುಕ ಚಟುವಟಿಕೆಗಳ (ಛಿಠಠಛ್ಞಿಠಿಜಿಚ್ಝ ್ಟ್ಝಜಜಿಟ್ಠಠ ಟ್ಟಚ್ಚಠಿಜ್ಚಿಛಿಠ) ವ್ಯಾಪ್ತಿಯಲ್ಲಿ ಬರುವುದರಿಂದ ಈ ವಿಷಯದಲ್ಲಿ ಕೋರ್ಟ್ ಹಸ್ತಕ್ಷೇಪ ಸಾಧ್ಯವಿದೆಯೇ ಎಂಬ ಪ್ರಶ್ನೆಯೂ ಅನೇಕರನ್ನು ಕಾಡುತ್ತಿದೆ.
ಹಾಗೆ ನೋಡಿದರೆ, ಬಾಲ ಸನ್ಯಾಸ ಎನ್ನುವುದು ಹೊಸ ವಿಷಯವೇನಲ್ಲ. ಬೌದ್ಧ ಧರ್ಮದಲ್ಲಿ 10 ವರ್ಷಕ್ಕಿಂತ ಕೆಳಗಿನ ಶಿಷ್ಯಂದಿರನ್ನು ಕರ್ಮಪಾಗಳನ್ನಾಗಿ (ಸನ್ಯಾಸಿ) ನೇಮಿಸುವ ಪದ್ಧತಿ ಜಾರಿಯಲ್ಲಿದೆ.
*ಹೆತ್ತವರ ಒಪ್ಪಿಗೆ*
ಅನಿರುದ್ಧ ಸರಳತ್ತಾಯರ (ಈಗಿನ ಹೆಸರು ವಿದ್ಯಾವರ್ಧನ ತೀರ್ಥ) ಹೆತ್ತವರಾದ ನಿಡ್ಲೆಯ ಉದಯಕುಮಾರ್ ಸರಳತ್ತಾಯ ಮತ್ತು ಶ್ರೀವಿದ್ಯಾ ದಂಪತಿ ಒಪ್ಪಿಗೆ ಮೇರೆಗೆ ಸನ್ಯಾಸ ದೀಕ್ಷೆ ನೀಡಲಾಗಿತ್ತು. ಹೀಗಾಗಿ, ಶೀರೂರು ಮಠಕ್ಕೆ ಈಗ ವಿದ್ಯಾವರ್ಧನ ತೀರ್ಥರೇ ಅಧಿಕೃತ ಮಠಾಧಿಪತಿ. ವಿದ್ಯಾವರ್ಧನ ತೀರ್ಥರ ಒಪ್ಪಿಗೆ ಪಡೆದೇ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ನಮ್ಮ ಮಗನಿಗೆ ಸನ್ಯಾಸ ದೀಕ್ಷೆ ಕೊಡುವ ಮುನ್ನ ರಾಜ್ಯ ಸರ್ಕಾರದ ಬಾಲ ಕಾರ್ವಿುಕ ವಿಭಾಗದವರು ಎಲ್ಲ ಮಾಹಿತಿ ಸಂಗ್ರಹಿಸಲು ಮನೆಗೆ ಬಂದಿದ್ದರು, ನಾವು ಎಲ್ಲ ದಾಖಲೆಗಳನ್ನು ನೀಡಿದ್ದೆವು. ಬಾಲಕನ 10ನೇ ತರಗತಿ ಪೂರ್ಣಗೊಂಡಿದೆ ಕೂಡ. ಶಾಸ್ತ್ರಗಳ ಪ್ರಕಾರ, 16ನೇ ವಯಸ್ಸಿಗೆ ಬಾಲಕ ಪ್ರೌಢತ್ವಕ್ಕೆ ಬರುತ್ತಾನೆ. ಇವೆಲ್ಲವನ್ನು ಪರಿಶೀಲಿಸಿ, ಪುತ್ರನ ಒಪ್ಪಿಗೆ, ಆಶಯಕ್ಕೆ ತಕ್ಕಂತೆಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಉದಯಕುಮಾರ್ ‘ವಿಜಯವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸನ್ಯಾಸತ್ವ ಸ್ವೀಕಾರ ನನ್ನ ವೈಯಕ್ತಿಕ ನಿರ್ಧಾರ ಮತ್ತು ಇಲ್ಲಿ ಆಮಿಷ, ಒತ್ತಡದ ಪ್ರಶ್ನೆಯೇ ಇಲ್ಲ. ಸೋದೆ ಶ್ರೀಗಳೂ ನನ್ನ ಬಗ್ಗೆ ತಿಳಿದುಕೊಂಡೇ ದೀಕ್ಷೆ ಕೊಟ್ಟಿದ್ದಾರೆ ಎಂದು ಶೀರೂರು ಮಠಾಧಿಪತಿ ವಿದ್ಯಾವರ್ಧನ ತೀರ್ಥರು ತಿಳಿಸಿದ್ದಾರೆ.
*8ನೇ ವಯಸ್ಸಲ್ಲಿ ದೀಕ್ಷೆ*
ಶೀರೂರು ಮಠದ ನಿಕಟಪೂರ್ವ ಸ್ವಾಮಿಗಳಾದ ಲಕ್ಷ್ಮೀವರತೀರ್ಥ ಸ್ವಾಮೀಜಿಗೆ 8ನೇ ವಯಸ್ಸಲೇ ಸನ್ಯಾಸ ದೀಕ್ಷೆ ನೀಡಿ, ಮಠಾಧಿಪತಿಯನ್ನಾಗಿ ನೇಮಿಸಲಾಗಿತ್ತು. ಅವರ ಸೋದರ ಲಕ್ಷ್ಮೀ ಮನೋಜ್ಞ ತೀರ್ಥರು ಪೀಠತ್ಯಾಗ ಮಾಡಿದ್ದರಿಂದ ಲಕ್ಷ್ಮೀವರ ತೀರ್ಥರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲಾಯಿತು. ಅಂದಿನ ಸೋದೆ ಮಠದ ಸ್ವಾಮೀಜಿ ವಿಶ್ವೋತ್ಥಮ ತೀರ್ಥರು ಸನ್ಯಾಸ ದೀಕ್ಷೆ ನೀಡಿದ್ದರು. ನಿರ್ದಿಷ್ಟ ಮಠದ ಯತಿಗಳು ಕೃಷ್ಣೈಕ್ಯರಾದ ಸಂದರ್ಭಗಳಲ್ಲಿ ಉತ್ತರಾಧಿಕಾರಿ ಆಯ್ಕೆ ಮಾಡುವ ಅಧಿಕಾರ ದ್ವಂದ್ವ ಮಠಗಳಿಗಿರುತ್ತದೆ. ಇದನ್ನು ಅಷ್ಟಮಠಗಳಲ್ಲಿ ಪರಂಪರಾಗತವಾಗಿ ಅನುಸರಿಸಿಕೊಂಡು ಬರಲಾಗಿದೆ. ಶೀರೂರು ಮತ್ತು ಸೋದೆ ದ್ವಂದ್ವ ಮಠಗಳಾಗಿರುವುದರಿಂದ ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಮಾಡುವ ಅಧಿಕಾರ ಸೋದೆ ಮಠಕ್ಕಿದೆ ಎಂದು ಭಕ್ತರು ಹೇಳುತ್ತಾರೆ. ಪೇಜಾವರ ಮಠದ ದಿವಂಗತ ವಿಶ್ವೇಶ ತೀರ್ಥರು 8ನೇ ವಯಸ್ಸಲ್ಲೇ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಸಾಮಾನ್ಯವಾಗಿ ಮಠಗಳೊಂದಿಗೆ ಸಂಪರ್ಕ ಹೊಂದಿದ ವಟುಗಳನ್ನೇ (ಬ್ರಹ್ಮಾಚಾರಿ) ಆಯ್ಕೆ ಮಾಡಲಾಗುತ್ತದೆ. ಹಾಲಿ ಪ್ರಕರಣದಲ್ಲಿ ವಿದ್ಯಾವರ್ಧನ ಶ್ರೀಗಳ ತಂದೆ ಉದಯಕುಮಾರ್ ಸೋದೆ ಮಠದ ಆಸ್ಥಾನ ವಿದ್ವಾಂಸರು ಎನ್ನುವುದು ಗಮನಾರ್ಹ.
*ಅರ್ಜಿದಾರರ ದೂರಿನಲ್ಲೇನಿದೆ?*
- ಸೋದೆ ಮಠ ಆರ್ಥಿಕ ಸಂಕಷ್ಟದಲ್ಲಿದ್ದು, ಶೀರೂರು ಮಠದ ಆಸ್ತಿಯ ಲಾಭ ಪಡೆಯಲು ಯತ್ನಿಸುತ್ತಿದೆ
- ಶೀರೂರು ಮಠದ ಹಣಕಾಸು, ಆಧ್ಯಾತ್ಮಿಕ/ ಧಾರ್ವಿುಕ ವಿಷಯಗಳಲ್ಲಿ ಸೋದೆ ಮಠ ಮೂಗು ತೂರಿಸುವಂತಿಲ್ಲ
- ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಮಠದ ಆಡಳಿತ ನಿರ್ವಹಿಸುವಷ್ಟು ಸಾಮರ್ಥ್ಯ, ಪ್ರಬುದ್ಧತೆ ಇರುವುದಿಲ್ಲ. ಗೃಹಸ್ಥ- ಸನ್ಯಾಸತ್ವ ನಡುವಿನ ವ್ಯತ್ಯಾಸವೂ ಗೊತ್ತಿರುವುದಿಲ್ಲ
- ಬಾಲಕ ಶೀರೂರು ಮಠದ ಶಿಷ್ಯನಾಗಿರಲಿಲ್ಲ
*ಸಾಂವಿಧಾನಿಕ ರಕ್ಷಣೆ*
ಅಷ್ಟಮಠಗಳ ಪೈಕಿ ಎರಡೆರಡು ಮಠಗಳನ್ನು ದ್ವಂದ್ವ ಮಠಗಳನ್ನಾಗಿ ಗುರುತಿಸುವುದು ಕಾನೂನಿನಲ್ಲಿ ಇದೆ. 1916ರಲ್ಲಿ ಭೀಮನಕಟ್ಟೆ ಮಠಾಧಿಪತಿಗಳು ಭಂಡಾರಕೇರಿ ಮಠಕ್ಕೆ ಮಠಾಧಿಪತಿಗಳ ನೇಮಕ ಮಾಡಿದ್ದರು. ಆ ಪ್ರಕರಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅದನ್ನು ಇತ್ಯರ್ಥ ಮಾಡಿದ್ದ ವಿಭಾಗೀಯ ಪೀಠ, ಉಡುಪಿಯ ಅಷ್ಟಮಠಗಳ ಪೈಕಿ ಪ್ರಚಲಿತದಲ್ಲಿದ್ದ ದ್ವಂದ್ವ ಮಠಗಳ ಪದ್ಧತಿಯ ಬಗ್ಗೆ ವಿಶ್ಲೇಷಣೆ ಮಾಡಿತ್ತು. ತುರ್ತು ಪರಿಸ್ಥಿತಿಯಲ್ಲಿ ಅಷ್ಟಮಠಗಳ ಪೈಕಿ ಯಾವುದೇ ಮಠಕ್ಕೆ ಉತ್ತರಾಧಿಕಾರಿ ನೇಮಕವಾಗಿಲ್ಲದ ಪರಿಸ್ಥಿತಿಯಲ್ಲಿ ದ್ವಂದ್ವ ಮಠಗಳು ಪರಸ್ಪರ ಒಂದಕ್ಕೊಂದು ಮಠಾಧಿಪತಿಯನ್ನು ನೇಮಿಸುವ ಅಧಿಕಾರ ಹೊಂದಿರುತ್ತವೆ ಎನ್ನುವ ಧಾರ್ವಿುಕ ಸಂಪ್ರದಾಯವನ್ನು ನ್ಯಾಯಾಲಯ ಸ್ಪಷ್ಟವಾಗಿ ಎತ್ತಿಹಿಡಿದಿದೆ. ಇದು ಅತ್ಯವಶ್ಯ ಧಾರ್ವಿುಕ ಆಚರಣೆಗಳಾಗಿ ಸಂವಿಧಾನದಡಿ ಸಂರಕ್ಷಿಸಲ್ಪಟ್ಟಿವೆ. ವಟುವಿಗೂ ಹಾಗೂ ಅವರ ಪಾಲಕರಿಗೂ ಧಾರ್ವಿುಕ ಸ್ವಾತಂತ್ರ್ಯ ಇದೆ. ಅವರ ವಿವೇಚನೆಯಲ್ಲಿ ಸ್ವ ಇಚ್ಛೆಯಿಂದ ಸನ್ಯಾಸಾಶ್ರಮಕ್ಕೆ ಒಪು್ಪವ ಅವರ ಸ್ವಾತಂತ್ರ್ಯವನ್ನು ಸಂವಿಧಾನ ರಕ್ಷಿಸುತ್ತದೆ ಎನ್ನುತ್ತಾರೆ ಸುಪ್ರೀಂಕೋರ್ಟ್ ವಕೀಲ ರಾಘವೇಂದ್ರ ಶ್ರೀವತ್ಸ.
*ಸೋದೆ ಶ್ರೀಗಳ ಅತೃಪ್ತಿ*
ಅಪ್ರಾಪ್ತ ವಯಸ್ಕನಿಗೆ ಸನ್ಯಾಸ ದೀಕ್ಷೆ ನೀಡಲಾಗಿಲ್ಲ. ಹೆತ್ತವರ ಸಮ್ಮತಿಯಿರುವುದು ಎಲ್ಲರಿಗೂ ಗೊತ್ತಿದೆ. ಹಾಗಾದರೆ, ಇದನ್ನು ಪ್ರಶ್ನಿಸುತ್ತಿರುವ ಮೂರನೇ ವ್ಯಕ್ತಿ ಲಾತವ್ಯ ಆಚಾರ್ಯ ಯಾರು ಎಂದು ಸೋದೆ ವಿಶ್ವವಲ್ಲಭ ಶ್ರೀಗಳು ಪ್ರಶ್ನಿಸಿದ್ದಾರೆ. ಅವರ ಘನ ಉದ್ದೇಶ ಏನೆಂಬುದು ಮಠದ ಭಕ್ತಾದಿಗಳಿಗೆ ತಿಳಿದಿದೆ. ಅದನ್ನು ಮತ್ತೆ ಮತ್ತೆ ನಾನೇಕೆ ಹೇಳಲಿ? ಮೇಲಾಗಿ, ವಟುವಿನ ಜಾತಕ ಅಧ್ಯಯನದಲ್ಲಿ ಸನ್ಯಾಸ ಯೋಗ ಇರುವುದಲ್ಲದೆ, ಮನೋಧರ್ಮವನ್ನೂ ವಿಮಶಿಸಲಾಗಿದೆ. 2 ವರ್ಷದಿಂದ ವಟುವನ್ನು ಗಮನಿಸಿದ್ದೇವೆ ಮತ್ತು 1 ತಿಂಗಳು ನನ್ನ ಜತೆಗೇ ಸಂಚಾರ ಮಾಡಿದ್ದರು. ಬಾಲಸನ್ಯಾಸ ಕಾನೂನುಬಾಹಿರ ಎಂಬ ದಾಖಲೆಗಳಿಲ್ಲ. ಕೋರ್ಟ್ ನಮ್ಮಿಂದ ಮಾಹಿತಿ ಕೇಳಿದರೆ, ಅರ್ಜಿದಾರರ ತಕರಾರಿಗೆ ತಕ್ಕ ಉತ್ತರ ನೀಡಲು ಸಿದ್ಧರಿದ್ದೇವೆ ಎಂದು ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಅರ್ಜಿದಾರರಿಗೆ ಮಠದ ಆಸ್ತಿ ಮೇಲೆ ಕಣ್ಣಿದೆ. ಅವರ ಆಪ್ತರು ಮಠಾಧಿಪತಿ ಆಗದ್ದರಿಂದ ಆಸ್ತಿ ಕೈತಪ್ಪಲಿದೆ ಎಂದೇ ವಿವಾದ ಸೃಷ್ಟಿಸಿದ್ದಾರೆ ಎಂದು ಸೋದೆ ಮಠದ ಆಪ್ತ ವರ್ಗ ಹೇಳುತ್ತಿದೆ.
*ಹಿಂದು ಶಾಸ್ತ್ರೀಯ ಪದ್ಧತಿ ಉಲ್ಲೇಖ*
ಭಾರತದ ಪ್ರಜೆಗಳನ್ನು ಪ್ರಾಪ್ತವಯಸ್ಕರೆಂದು ಗುರುತಿಸಲು ಇರುವ ಕಾನೂನು ಆಂಗ್ಲರು ತಂದ Indian Majority Act 1875. ಅಂದಿನ ಶಾಸಕಾಂಗ ಹಿಂದೂ ಶಾಸ್ತ್ರೀಯ ಪದ್ಧತಿಯಂತೆ ಒಬ್ಬ ಮನುಷ್ಯ 16ನೇ ವರ್ಷಕ್ಕೆ ಪ್ರಾಪ್ತ ವಯಸ್ಕ ಆಗುತ್ತಾನೆಂದು ಗುರುತಿಸಿದೆ. ಬಂಗಾಳದಲ್ಲಿನ ಹಿಂದೂ ಶಾಸ್ತ್ರೀಯ ಪದ್ಧತಿಯಂತೆ 15 ವರ್ಷಕ್ಕೇ ಒಬ್ಬ ಮನುಷ್ಯ ಪ್ರಾಪ್ತವಯಸ್ಕನಾಗುತ್ತಾನೆ. ಹೀಗೆ ಜಾರಿಗೆ ಬಂದ ಆಂಗ್ಲರ ಈ ಕಾನೂನನ್ನು ಯಾವುದೇ ಧಾರ್ವಿುಕ ವಿಧಿ ವಿಧಾನ ಪದ್ಧತಿ ಅಥವಾ ಸಂಪ್ರದಾಯಕ್ಕೆ ಅಳವಡಿಸಲು ಅವಕಾಶವಿಲ್ಲ ಎಂದು ಈ ಕಾಯ್ದೆಯ ಸೆಕ್ಷನ್ರಲ್ಲಿ ಸ್ಪಷ್ಟಪಡಿಸಲಾಗಿದೆ. ಬಾಲಕ ಅಥವಾ ವ್ಯಕ್ತಿ ತಾನು ಸನ್ಯಾಸ ಧರ್ಮ ಸ್ವೀಕರಿಸಬೇಕು ಎಂದು ನಿಶ್ಚಯ ಮಾಡುವ ಧಾರ್ವಿುಕ ಸ್ವಾತಂತ್ರ್ಯ ಮತ್ತು ಹಕ್ಕು ಸಂವಿಧಾನದಲ್ಲಿ ಲಭ್ಯವಿದೆ. ಅಂತಹ ಬಾಲಕನಿಗಾಗಲಿ ಅಥವಾ ಪಾಲಕರಿಗಾಗಲಿ ಯಾವುದೇ ರೀತಿಯ ಬಲವಂತ ಮಾಡದೆ 16 ವರ್ಷದ ವಟುವಿಗೆ ಸನ್ಯಾಸ ದೀಕ್ಷೆ ಕೊಡುವುದು ಕಾನೂನಿಗೆ ವಿರುದ್ಧವಾದುದಲ್ಲ ಎಂದು ಕೆಲ ಕಾನೂನು ತಜ್ಞರು ವಾದಿಸಿದ್ದಾರೆ.