ನುಗ್ಗೆಕಾಯಿ ಮಾರಿ ಲಕ್ಷ ಆದಾಯ, ಶಿರಹಟ್ಟಿಯ ಬೆಳಗಟ್ಟಿ ಗ್ರಾಮದ ರೈತನ ಸಾಧನೆ

page 6 2
Published on

ಶಿರಹಟ್ಟಿ: ಲಾಕ್​ಡೌನ್​ನಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತ, ವ್ಯಾಪಾರಸ್ಥರ ಸಮಸ್ಯೆಯಿಂದ ಧೃತಿಗೆಡದ ರೈತರೊಬ್ಬರು ತಾನು ಬೆಳೆದ ನುಗ್ಗೆಕಾಯಿಯನ್ನು ಊರೂರು ತಿರುಗಿ ಮಾರಾಟ ಮಾಡಿ ಲಾಭ ಪಡೆದುಕೊಂಡಿದ್ದಾರೆ.

ಬೆಳಗಟ್ಟಿ ಗ್ರಾಮದ ರೈತ ಕೃಷ್ಣಪ್ಪ ಹಬಲಿ 2.20 ಎಕರೆ ಜಮೀನಿನಲ್ಲಿ 30 ಸಾವಿರ ರೂ. ವೆಚ್ಚದಲ್ಲಿ ಸುಮಾರು 1,100 ನುಗ್ಗೆ ಗಿಡ ಬೆಳೆಸಿದ್ದರು. ನುಗ್ಗೆಕಾಯಿ ಕಟಾವು ಹಂತದಲ್ಲೇ ಲಾಕ್​ಡೌನ್ ಜಾರಿಯಾಯಿತು. ಹೀಗಾಗಿ ಯಾವೊಬ್ಬ ವ್ಯಾಪಾರಸ್ಥನೂ ಖರೀದಿಗೆ ಮುಂದೆ ಬರಲಿಲ್ಲ. ಇದರಿಂದ ದಿಕ್ಕು ತೋಚದಂತಾದ ಅವರು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಸಲಹೆಯಂತೆ ಸ್ವಂತ ವಾಹನದಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ, ಬೆಳ್ಳಟ್ಟಿ ಹಾಗೂ ಸುತ್ತಮುತ್ತಲಿನ ಊರುಗಳಿಗೆ ತೆರಳಿ ಪ್ರತಿ ಕೆ.ಜಿ.ಗೆ 50 ರೂ. ನಂತೆ 15 ದಿನಗಳಲ್ಲಿ 43 ಕ್ವಿಂಟಾಲ್ ನುಗ್ಗೆಕಾಯಿ ಮಾರಾಟ ಮಾಡಿ 1.10 ಲಕ್ಷ ರೂ. ಸಂಪಾದನೆ ಮಾಡಿದ್ದಾರೆ.

ಜತೆಗೆ ತೋಟಗಾರಿಕೆ ಇಲಾಖೆಯ ನರೇಗಾ ಯೋಜನೆಯಲ್ಲಿ 67 ಸಾವಿರ ರೂ. ಸಹಾಯ ಧನವಾಗಿ ನೀಡಿದ್ದು ಬಹಳಷ್ಟು ಸಹಕಾರಿಯಾಗಿದೆ ಎನ್ನುತ್ತಾರೆ ಕೃಷ್ಣಪ್ಪ.

ತರಕಾರಿ ಬೆಳೆದ ರೈತರು ಲಾಕ್​ಡೌನ್ ಎಂದು ಹತಾಶರಾಗಿ ಮನೆಯಲ್ಲಿ ಕುಳಿತು ಸಾವಿರಾರು ರೂ. ಖರ್ಚು ಮಾಡಿದ ಬೆಳೆ ನಾಶ ಮಾಡಿಕೊಂಡರೆ ಪ್ರಯೋಜನವಿಲ್ಲ. ಅದಕ್ಕೊಂದು ಪರ್ಯಾಯ ವ್ಯವಸ್ಥೆ ಹುಡುಕಿ ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. | ಸುರೇಶ ಕುಂಬಾರ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಶಿರಹಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net