

ಶಿವಮೊಗ್ಗ: ಶಿಮುಲ್(ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ)ನ ಆಡಳಿತ ಮಂಡಳಿಯ 14 ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ ಈಗಾಗಲೇ ಕಾಂಗ್ರೆಸ್ ಸಂಪೂರ್ಣ ಹಿಡಿತ ಸಾಧಿಸಿದೆ. ಈ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಆ.26ರಂದು ನಿಗದಿಯಾಗಿದ್ದು, ಬಹುತೇಕ ಅವಿರೋಧ ಆಯ್ಕೆ ನಡೆಯಲಿದೆ.
ಜು.14ರಂದು ಶಿಮುಲ್‌ನ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಲಾ ಏಳು ಮಂದಿ ಮರು ಆಯ್ಕೆಯಾದರೆ ಮತ್ತೆ ಏಳು ಹೊಸ ಮುಖಗಳು ಜಯಗಳಿಸಿದ್ದರು. ಮೂರು ಜಿಲ್ಲೆಗಳ ವ್ಯಾಪ್ತಿಯ ನಾಲ್ಕು ವಿಭಾಗಗಳಲ್ಲಿ ನಡೆದ ಚುನಾವಣೆಯಲ್ಲಿ ಹೊಸನಗರ ಕ್ಷೇತ್ರದಿಂದ ವಿದ್ಯಾಧರ ಹಾಗೂ ತೀರ್ಥಹಳ್ಳಿ ಕ್ಷೇತ್ರದಿಂದ ಆರ್.ಎಂ.ಮಂಜುನಾಥ ಗೌಡ ಮೊದಲ ಬಾರಿಗೆ ಶಿಮುಲ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದರು.
ಶಿಮುಲ್‌ನ ಮೂರು ಜಿಲ್ಲೆಗಳ ತಲಾ ನಾಲ್ವರು ನಿರ್ದೇಶಕರಿದ್ದು, ಮೂರು ಅವಧಿಗೆ ಅಧಿಕಾರದ ಹಂಚಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಲ್ಲಿ ಮಾಜಿ ಅಧ್ಯಕ್ಷರೂ ಆದ ವಿದ್ಯಾಧರ, ಶಿಕಾರಿಪುರದ ಟಿ.ಶಿವಶಂಕರಪ್ಪ ಹಾಗೂ ಹೊನ್ನಾಳಿಯ ಬಿ.ಜಿ.ಬಸವರಾಜಪ್ಪ ಅವರು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದು, ಯಾರಿಗೆ ಗದ್ದುಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.