ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ 25 ಸಾವಿರ ಮಂದಿಯಿಂದ ಏಕಕಾಲದಲ್ಲಿ ಯೋಗ

dc
Published on

ಶಿವಮೊಗ್ಗ: ವಿಶ್ವ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಆ.28ರಂದು ದೇಶವ್ಯಾಪಿ ಆಯೋಜನೆಗೊಂಡಿರುವ ಯೋಗಥಾನ್‌ನಲ್ಲಿ ಜಿಲ್ಲೆಯ 25 ಸಾವಿರ ಯೋಗಪಟುಗಳು ಭಾಗವಹಿಸಲಿದ್ದಾರೆ. ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ಏರ್‌ಪೋರ್ಟ್ ಆವರಣದಲ್ಲಿ ಇವರೆಲ್ಲರೂ 28ರ ಬೆಳಗ್ಗೆ 6.30ಕ್ಕೆ ಯೋಗಾಸನ ಮಾಡಲಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಅಗತ್ಯ ವ್ಯವಸ್ಥೆ ಕಲ್ಪಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

ಶನಿವಾರ ಯೋಗಥಾನ್ ಪೂರ್ವಸಿದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳನ್ನು ಸಂಪರ್ಕಿಸಿ ಯೋಗಪಟುಗಳು ಭಾಗವಹಿಸಲು ಪ್ರೇರೇಪಿಸಬೇಕೆಂದರು.

ಯೋಗಥಾನ್ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ಉಪಾಹಾರ, ಕುಡಿಯುವ ನೀರು ಒದಗಿಸಬೇಕು. ಯೋಗಥಾನ್ ಸ್ಥಳದಲ್ಲಿ ತಾತ್ಕಾಲಿಕ ಶೌಚಗೃಹ ನಿರ್ಮಿಸಬೇಕು. ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ ಮತ್ತು ಗೈಡ್ಸ್ ಸ್ವಯಂ ಸೇವಕರ ನೆರವು ಪಡೆಯಬೇಕೆಂದರು.

ಯೋಗಥಾನ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ತರಬೇತಿ ಆರಂಭಿಸಬೇಕು. ಸರ್ಕಾರ ಈಗಾಗಲೇ 21 ಆಸನಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಈ ಆಸನಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಗ ಪಟುಗಳು ಅಭ್ಯಾಸ ಮಾಡಬೇಕು. 13 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು, ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬೇಕು. ತುರ್ತು ಆರೋಗ್ಯ ಸೇವೆಗೆ ವ್ಯವಸ್ಥೆ ಮಾಡಬೇಕು. ಬೇರೆ ತಾಲೂಕುಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್‌ಗಳನ್ನು ಒದಗಿಸಬೇಕೆಂದರು.

ಶಿವಮೊಗ್ಗ ಉಪವಿಭಾಗಾಧಿಕಾರಿ ಎಸ್.ಬಿ.ದೊಡ್ಡಗೌಡರ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net