ಶಾಂತಿ ನಡಿಗೆಯಲ್ಲಿ 10 ಸಾವಿರ ಮಂದಿ ನಿರೀಕ್ಷೆ

pc
Published on

ಶಿವಮೊಗ್ಗ: ಅಶಾಂತಿ ವಾತಾವರಣದಿಂದ ಶಿವಮೊಗ್ಗದ ಆರ್ಥಿಕತೆಗೂ ಹಿನ್ನಡೆಯಾಗುತ್ತಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೆ.3ರಂದು ಶಿವಮೊಗ್ಗದಲ್ಲಿ ಶಾಂತಿ ನಡಿಗೆ ಹಮ್ಮಿಕೊಳ್ಳಲಾಗಿದೆ. ಸುಮಾರು 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಎಂದು ಸರ್ಜಿ ಫೌಂಡೇಷನ್ ಅಧ್ಯಕ್ಷ ಡಾ.ಧನಂಜಯ ಸರ್ಜಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಸಾಹಿತಿಗಳಿಗೆ, ರಾಜಕೀಯ ನಾಯಕರಿಗೆ ಜನ್ಮ ನೀಡಿದ್ದು ಶಿವಮೊಗ್ಗ ಜಿಲ್ಲೆ. ಕಳೆದ ಎಂಟು ತಿಂಗಳಲ್ಲಿ ಶಿವಮೊಗ್ಗದಲ್ಲಿ ಗಲಭೆ ಹಾಗೂ ಅಶಾಂತಿ ವಾತಾವರಣದಿಂದ ಸುಮಾರು ಮೂರು ಕೋಟಿ ರೂ. ನಷ್ಟ ಉಂಟಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆ ಪ್ರವಾಸ, ಆರೋಗ್ಯ ಹಾಗೂ ವ್ಯಾಪಾರದಿಂದಲೇ ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಬೇಡದ ಕಾರಣಕ್ಕೆ ಗುರುತಿಸಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಂತಿ ನಡಿಗೆ ಸಂಪೂರ್ಣವಾಗಿ ರಾಜಕೀಯದಿಂದ ಹೊರತಾಗಿರಲಿದೆ. ನಡಿಗೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಧರ್ಮ ಗುರುಗಳು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮೂರು ಕಡೆಯಿಂದ ಆರಂಭವಾಗುವ ನಡಿಗೆ ಎಎ ವೃತ್ತದಲ್ಲಿ ಒಂದುಗೂಡಿ ಸೈನ್ಸ್ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಎಲ್ಲ ನಾಗರಿಕರು ಇದರಲ್ಲಿ ಭಾಗವಹಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಮಾಡಬೇಕೆಂದರು.

ಶಾಂತಿ ನಡಿಗೆ ಸಂಚಾಲಕ ಕೆ.ಪಿ.ಶ್ರೀಪಾಲ ಮಾತನಾಡಿ, ಶಾಂತಿ ನಡಿಗೆಯಲ್ಲಿ ಆಯೋಜಕ ಸಂಘಟನೆಗಳ ಪ್ರಮುಖರು ಎಲ್ಲಿಯೂ ಮುನ್ನೆಲೆಗೆ ಬರುವುದಿಲ್ಲ. 27ಕ್ಕೂ ಹೆಚ್ಚು ಶಾಲೆಯ ಸುಮಾರು ಆರು ಸಾವಿರ ವಿದ್ಯಾರ್ಥಿಗಳು, ರೈತ ಹೋರಾಟಗಾರರು, ಎರಡು ಸಾವಿರ ಮಹಿಳೆಯರು, ಪ್ರಗತಿಪರ ಚಿಂತಕರು, ವ್ಯಾಪಾರಿಗಳು, ಉದ್ಯಮಿಗಳು, ಸೇರಿದಂತೆ 61 ಸಂಘ ಸಂಸ್ಥೆಗಳ ಪ್ರಮುಖರು ನಡಿಗೆಯಲ್ಲಿ ಸಾಗಲಿದ್ದಾರೆ ಎಂದು ತಿಳಿಸಿದರು.

ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ರೈತ ಮುಖಂಡ ಕೆ.ಟಿ.ಗಂಗಾಧರ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಕಿರಣ್‌ಕುಮಾರ್, ಡಿಎಸ್‌ಎಸ್ ಸಂಚಾಲನ ಎಂ.ಗುರುಮೂರ್ತಿ, ದಲಿತ ಮುಖಂಡ ಟಿ.ಹಾಲೇಶಪ್ಪ, ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಜೇಸಿ ಅಧ್ಯಕ್ಷೆ ಪುಷ್ಪಾ ಶೆಟ್ಟಿ, ಪ್ರಮುಖರಾದ ಕೆ.ಎಲ್.ಅಶೋಕ್, ಕೃಷ್ಣಮೂರ್ತಿ, ಅಫ್ತಾಬ್ ಫರ್ವೀಜ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net