ಸ್ಮಾರ್ಟ್ ಸಿಟಿ ಗೋಲ್‌ಮಾಲ್‌ಗೆ ಆಕ್ರೋಶ

palike
Published on

ಶಿವಮೊಗ್ಗ: ನಗರ ಪಾಲಿಕೆ ಹೊರ ಆವರಣದ ಸುತ್ತಲೂ ನೆಲಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕಲ್ಲುಹಾಸು ನಿರ್ಮಿಸಲಾಗಿದೆ. ಇದಕ್ಕೆ ಪಾಲಿಕೆಯಿಂದ ಅನುಮತಿಯನ್ನೂ ಪಡೆದಿಲ್ಲ. 4.6 ಕೋಟಿ ರೂ. ವೆಚ್ಚದ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಕಂದಾಯ ಅಧಿಕಾರಿ ಪ್ರಮೋದ್ ಅವರಿಗೆ ಮನವಿ ಸಲ್ಲಿಸಿದರು.

ಪಾಲಿಕೆಯ ಪೂರ್ವಾನುಮತಿಯಲ್ಲದೇ ಈ ದುಬಾರಿ ಕಾಮಗಾರಿ ಕೈಗೊಂಡಿರುವ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಹಾಗೂ ಇಂಜಿನಿಯರ್ ವಿಜಯಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರಿಂದಲೇ ಹಣ ವಸೂಲಿ ಮಾಡಬೇಕೆಂದು ಆಗ್ರಹಿಸಿದರು.

ಈ ಕಾಮಗಾರಿ ನಡೆಸುವಂತೆ ಪಾಲಿಕೆಯಿಂದ ಸ್ಮಾರ್ಟ್ ಸಿಟಿಗೆ ಯಾವುದೇ ಪತ್ರ ಬರೆದಿಲ್ಲ. ನಗರ ಪಾಲಿಕೆ ಸದಸ್ಯರಿಗೂ ಇದರ ಬಗ್ಗೆ ಮಾಹಿತಿಯಿಲ್ಲ. ಅನುಮೋದನೆ ಪಡೆಯದೇ ಕಾಮಗಾರಿ ನಡೆಸಲಾಗಿದೆ. ಸ್ಮಾರ್ಟ್ ಸಿಟಿ ನಿಯಮದ ಪ್ರಕಾರ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕಾಮಗಾರಿಯ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾಗಿದ್ದ ಚಿದಾನಂದ ವಟಾರೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಈ ಕಲ್ಲುಹಾಸಿನ ಮೇಲೆ ನಡೆದುಕೊಂಡು ಹೋಗುವುದು ಹಾಗೂ ದ್ವಿಚಕ್ರ ವಾಹನ, ಸೈಕಲ್‌ನಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಈ ಕಾಮಗಾರಿಯಿಂದ ಸ್ವಚ್ಛತೆಗೂ ಹಿನ್ನಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮತ್ತು ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಎಲ್ಲ ಅಧಿಕಾರಗಳ ವಿರುದ್ಧವೂ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಪ್ರಮುಖರಾದ ಚನ್ನವೀರಪ್ಪ ಗಾಮನಗಟ್ಟಿ, ವೇದಮೂರ್ತಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net