

ಶಿವಮೊಗ್ಗ: ಮೊಘಲರ ವಿರುದ್ಧ ಶಿವಾಜಿ ಯುದ್ಧ ಮಾಡುವಾಗ ರಜಪೂತರು ಮೊಘಲರೊಂದಿಗೆ ಕೈ ಜೋಡಿಸಿದ್ದರು. ರಜಪೂತರು ಸ್ವಾತಂತ್ರೃ ಹೋರಾಟದಲ್ಲೂ ಭಾಗವಹಿಸಲಿಲ್ಲ ಎಂದು ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ರಜಪೂತ ಸಮಾಜದ ಪ್ರಮುಖರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಿ.ಟಿ.ರವಿ ಅಪ್ರಸ್ತುತವಾಗಿ ಮಾತನಾಡಿದ್ದಲ್ಲದೇ ನಮ್ಮ ಸಮಾಜದ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸುವ ಹೇಳಿಕೆ ನೀಡಿದ್ದಾರೆ. ನಮ್ಮ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಅವರು ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊಘಲರ ವಿರುದ್ಧ ರಜಪೂತರು ಪರಾಕ್ರಮದಿಂದ ಹೋರಾಟ ನಡೆಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಔರಂಗಜೇಬ್, ಅಕ್ಬರ್ ಕಾಲದಲ್ಲಿ ರಜಪೂತರ ಹೋರಾಟ ಮತ್ತು ಪರಾಕ್ರಮವನ್ನು ಚರಿತ್ರೆಯಲ್ಲಿ ಬಣ್ಣಿಸಾಗಿದೆ. ದೇಶ ಪ್ರೇಮ, ಹೋರಾಟ, ಪರಾಕ್ರಮ, ಧರ್ಮ ನಿಷ್ಠೆ ವಿಷಯದಲ್ಲಿ ರಜಪೂತ ಜನಾಂಗ ಇಂದಿಗೂ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.
ಶಿವಾಜಿ ಮಹಾರಾಜರನ್ನು ಹೊಗಳಿ, ರಜಪೂತ ಸಮಾಜವನ್ನು ತೆಗಳುವ ಮೂಲಕ ಕ್ಷತ್ರಿಯರಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನು ಸಿ.ಟಿ.ರವಿ ಮಾಡಿದಂತಿದೆ. ನಮ್ಮ ಸಮಾಜಕ್ಕೆ ಅವಮಾನ ಮಾಡಿದ ಹೇಳಿಕೆಯನ್ನು ಸಿ.ಟಿ.ರವಿ ಹಿಂಪಡೆಯಬೇಕು. ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಶಾಂತಿ ಕದಡಿದ ರವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ರಜಪೂತ್‌ಸಭಾದ ಅಧ್ಯಕ್ಷ ಆರ್.ದೀಪಕ್ ಸಿಂಗ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್.ಪಿ.ಭರತ್‌ರಾಜ್ ಸಿಂಗ್, ಎಸ್.ಎಂ.ವಿಶ್ವನಾಥ್ ಸಿಂಗ್, ಎಸ್.ಡಿ.ಅನಂತರಾಮ್ ಸಿಂಗ್, ಆರ್.ಎಚ್.ಸತ್ಯನಾರಾಯಣ ಸಿಂಗ್, ಉದಯ್ ಸಿಂಗ್, ಶಂಕರ್ ಸಿಂಗ್ ಮುಂತಾದವರು ಭಾಗವಹಿಸಿದ್ದರು.