ಶಿವಮೊಗ್ಗದಲ್ಲಿ ತಗ್ಗಿದ ಮಳೆ: ತಪ್ಪದ ಅನಾಹುತ

rain
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ಮಳೆ ಕೊಂಚ ಬಿಡುವು ನೀಡಿದೆ. ಜಲಾಶಯಗಳ ಒಳಹರಿವಿನಲ್ಲೂ ಇಳಿಮುಖವಾಗಿದೆ. ಅನೇಕ ಕಡೆಗಳಲ್ಲಿ ಪ್ರವಾಹದ ಆತಂಕ ದೂರಾಗಿದೆ. ಆದರೆ ಅನಾಹುತಗಳು ಮುಂದುವರಿದಿವೆ. ರಿಪ್ಪನ್‌ಪೇಟೆಯಲ್ಲಿ ಕಿರು ಸೇತುವೆಗೆ ಹಾನಿ ಉಂಟಾಗಿದ್ದು, ಆನವಟ್ಟಿಯಲ್ಲಿ ಬಡಾವಣೆಯೊಂದರ ಸಂಪರ್ಕ ಮಾರ್ಗ ಕೊಚ್ಚಿ ಹೋಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಮೂರು ಮನೆಗಳು ಧರೆಗುರುಳಿವೆ. ಇದುವರೆಗೆ ಶಿವಮೊಗ್ಗ ತಾಲೂಕಿನಲ್ಲೇ 15 ಮನೆಗಳು ನೆಲಕ್ಕುರುಳಿವೆ.

ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಹಾಗೂ ಸೊರಬ ತಾಲೂಕು ಅಂಡಿಗೆ ಗ್ರಾಮದಲ್ಲಿ ಕಳೆದ 24 ತಾಸಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅಂಡಿಗೆಯಲ್ಲಿ 129 ಮಿಮೀ ಮಳೆ ಬಿದ್ದರೆ ಹೊನ್ನೆತಾಳು ಗ್ರಾಮದಲ್ಲಿ 126.5 ಮಿಮೀ ಮಳೆಯಾಗಿದೆ.

ಭದ್ರಾ ನದಿಯಲ್ಲಿ ಪ್ರವಾಹ ತಗ್ಗಿದ್ದು, ಹೊಸ ಸೇತುವೆ ಮೇಲೆ ಬುಧವಾರದಿಂದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕವಲಗುಂದಿ ಮುಖ್ಯ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ತೆರವು ಮಾಡಿ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಸಂಗ್ರಹ 1,807 ಅಡಿ ತಲುಪಿದ ಬೆನ್ನಲ್ಲೇ ಬುಧವಾರ ಕೆಪಿಸಿ ಅಧಿಕಾರಿಗಳು ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಈಗಾಗಲೇ ಜಲಾಶಯದ ಕೆಳ ಭಾಗದ ಜನರಿಗೆ ಎರಡನೇ ಬಾರಿಗೆ ಕೆಪಿಸಿಯಿಂದ ಎಚ್ಚರಿಕೆ ನೀಡಿದ್ದು, ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆಗಳಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net