

ಶಿವಮೊಗ್ಗ: ಕುರುಬ ಸಮುದಾಯಕ್ಕೆ ಸಂಬಂಧಿಸಿದ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಶೀಘ್ರವೇ ಅಂಗೀಕರಿಸಿ ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಒಳಪಡಿಸಬೇಕೆಂದು ಒತ್ತಾಯಿಸಿ ಹಾಲುಮತ ಮಹಾಸಭಾ ಪ್ರಮುಖರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕುರುಬ ಜನಾಂಗವನ್ನು ಎಸ್ಟಿ ಮೀಸಲಿಗೆ ಒಳಪಡಿಸುವ ಸಂಬಂಧ 2018ರಲ್ಲೇ ಅಂದಿನ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಿತ್ತು. ರಾಯಚೂರಿನಿಂದ ಚಾಮರಾಜ ನಗರ ಜಿಲ್ಲೆವರೆಗೂ ಅಧ್ಯಯನ ನಡೆದಿದೆ. ಇದನ್ನು ಕೂಡಲೇ ಅಂಗೀಕರಿಸಿ ನಮ್ಮ ಹಕ್ಕೊತ್ತಾಯಕ್ಕೆ ಮನ್ನಣೆ ನೀಡಬೇಕೆಂದು ಆಗ್ರಹಿಸಿದರು.
ಅಧ್ಯಯನ ವರದಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ನಮ್ಮ ಸಮಾಜ ಹಲವು ವರ್ಷಗಳಿಂದಲೂ ಮೀಸಲಾತಿ ತಾರತಮ್ಯ ಎದುರಿಸುತ್ತಿದೆ. ಮೀಸಲಾತಿ ಅಸಮಾನತೆಯನ್ನು ಹೋಗಲಾಡಿಸಬೇಕೆಂದು ಒತ್ತಾಯಿಸಿದರು.
ಹಾಲುಮತ ಮಹಾಸಭಾದ ಸಂಚಾಲಕ ವಾಟಾಳ್ ಮಂಜುನಾಥ್, ಪ್ರಮುಖರಾದ ಮೋಹನ್‌ಕುಮಾರ್, ಜಿ.ಆರ್.ಷಡಾಕ್ಷರಪ್ಪ, ದೊಡ್ಡಪ್ಪ, ವಿನಯ್ ನಾರಾಯಣ ಸ್ವಾಮಿ ಮುಂತಾದವರಿದ್ದರು.