ಉತ್ತಮ ಕ್ರಿಯಾಯೋಜನೆ ರೂಪಿಸಿ

KCN
Published on

ಶಿವಮೊಗ್ಗ: ಗ್ರಾಪಂ ದೂರದೃಷ್ಟಿ ಯೋಜನೆಗೆ ಸಂಬಂಧಿಸಿದಂತೆ ಉತ್ತಮವಾದ ಕ್ರಿಯಾ ಯೋಜನೆಗಳನ್ನು ರೂಪಿಸಿ ನಿಗದಿತ ಸಮಯದಲ್ಲಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ತಿಳಿಸಿದರು.

ಮಂಗಳವಾರ ಗ್ರಾಪಂ ದೂರದೃಷ್ಟಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರಿಯಾ ಯೋಜನೆ ರೂಪಿಸುವ ಸಂಬಂಧ ಗ್ರಾಪಂ ಜನಪ್ರತಿನಿಧಿಗಳಿಗೆ ಸೂಕ್ತವಾದ ತರಬೇತಿ ನೀಡಬೇಕು. ಜನಪ್ರತಿನಿಧಿಗಳಿಗೆ ಕಾನೂನಿನ ಸಮರ್ಪಕ ಅರಿವು ಇದ್ದರೆ ಆಡಳಿತ ನಡೆಸುವುದು ಸುಲಭವಾಗುತ್ತದೆ ಎಂದರು.

ಮೂಲ ಸೌಕರ್ಯ ಸೇರಿದಂತೆ ಮುಂದಿನ ಐದು ವರ್ಷಗಳಲ್ಲಿ ಗ್ರಾಪಂನಿಂದ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಉತ್ತಮವಾದ ಕ್ರಿಯಾಯೋಜನೆ ರೂಪಿಸುವ ಗ್ರಾಪಂಗಳಿಗೆ ಬಹುಮಾನ ವಿತರಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರಿಗೆ ಸೂಚಿಸಿದರು.

ಶಾಸಕ ಕೆ.ಬಿ.ಅಶೋಕ ನಾಯ್ಕ ಮಾತನಾಡಿ, ಗ್ರಾಮ ರಾಜ್ಯದಿಂದ ರಾಮ ರಾಜ್ಯ ಎಂಬ ಗಾಂಧೀಜಿ ಪರಿಕಲ್ಪನೆಗೆ ಪೂರಕವಾಗಿ ಗ್ರಾಪಂ ದೂರದೃಷ್ಟಿ ಯೋಜನೆ ರೂಪಿಸಲಾಗಿದೆ. ಇದರಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸಾಧ್ಯವಾಗಲಿದೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಇದರಿಂದ ಸಾಧ್ಯವಾಗಲಿದೆ. ಉದ್ಯೋಗಖಾತ್ರಿ ಯೋಜನೆ ಮೂಲಕ ಕೋಟ್ಯಂತರ ರೂ. ಅನುದಾನ ಹರಿದು ಬರುತ್ತಿದೆ. ಗ್ರಾಮಗಳಲ್ಲಿ ಮೂಲ ಸೌಕರ್ಯ ಒದಗಿಸಲು ಇದರಿಂದ ಸಹಾಯವಾಗಲಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಉಪಕಾರ್ಯದರ್ಶಿ(ಆಡಳಿತ) ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net