ಶಿವಮೊಗ್ಗದಲ್ಲಿ ಇ-ತ್ಯಾಜ್ಯ ದಿನಾಚರಣೆ

MATURA
Published on

ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಸರ್ಜಿ ಫೌಂಡೇಷನ್, ಎನ್‌ಇಎಸ್, ಜಿಲ್ಲಾಡಳಿತ ಮತ್ತಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಅ.14ರಂದು ಅಂತಾರಾಷ್ಟ್ರೀಯ ಇ-ತ್ಯಾಜ್ಯ ದಿನವನ್ನು ವಿಭಿನ್ನವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ವಿಚಾರ ಸಂಕಿರಣ, 15 ದಿನಗಳ ಪರ್ಯಂತ ನಗರದ ವಿವಿಧೆಡೆ ಇ-ತ್ಯಾಜ್ಯ ಸಂಗ್ರಹ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, 14ರ ಮಧ್ಯಾಹ್ನ 2ಕ್ಕೆ ಎಟಿಎನ್‌ಸಿ ಕಾಲೇಜಿನಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ಇ-ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಎಂದರು.

ಜಾಗತಿಕವಾಗಿ, ಪ್ರತಿ ವರ್ಷ ಸುಮಾರು 57 ಮಿಲಿಯನ್ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಪ್ರತಿ ವ್ಯಕ್ತಿಯಿಂದ ಸರಾಸರಿ 6.8 ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಶ್ರೀಮಂತ ದೇಶಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಿದೆ. ಇ-ತ್ಯಾಜ್ಯದ ಮರುಬಳಕೆಯೊಂದೇ ಎಲ್ಲದಕ್ಕೂ ಪರಿಹಾರವಾಗಿದೆ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾಚಾರ್ಯ ಪ್ರೊ.ರಂಗನಾಥ್‌ರಾವ್ ಮಾತನಾಡಿ, ಇ-ತ್ಯಾಜ್ಯದ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಮೊಬೈಲ್, ಟಿವಿ, ಕಂಪ್ಯೂಟರ್ ಮುಂತಾದವುಗಳ ಮರುಬಳಕೆಯಿಂದ ಹೆಚ್ಚಿನ ಅನುಕೂಲವಾಗುತ್ತದೆ. ಸಿಮ್‌ಗಳಲ್ಲಿ ಅಲ್ಪ ಪ್ರಮಾಣದ ಚಿನ್ನ ಬಳಸಲಾಗುತ್ತದೆ. ಎಲ್ಲ ಸಿಮ್‌ಗಳನ್ನು ಸಂಗ್ರಹಿಸಿ ಸಂಸ್ಕರಿಸಿದರೆ ಚಿನ್ನವನ್ನೂ ಪಡೆಯಬಹುದಾಗಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲಿ ತಾಮ್ರ, ಸೀಸ ಲಭ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ಸರ್ಜಿ ಫೌಂಡೇಷನ್‌ನ ಅಧ್ಯಕ್ಷ ಡಾ.ಧನಂಜಯ ಸರ್ಜಿ, ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಎಲ್. ಜನಾರ್ಧನ್, ನಿವೃತ್ತ ಪ್ರಾಚಾರ್ಯ ಪ್ರೊ.ರಂಗನಾಥ ರಾವ್, ಪ್ರಮುಖರಾದ ಡಿ.ವೆಂಕಟೇಶ್, ರಂಗನಾಥ್, ರಮೇಶ್ ಹೆಗ್ಡೆ, ಗಣೇಶ್ ಅಂಗಡಿ, ಜಿ.ವಿಜಯಕುಮಾರ್, ವಸಂತ್ ಹೋಬಳಿದಾರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net