ಶಾಂತಿ ನಡಿಗೆ ಪ್ರಚಾರಕ್ಕೆ ಚಾಲನೆ

jatha
Published on

ಶಿವಮೊಗ್ಗ: ನಗರದಲ್ಲಿ ಸೆ.3ರಂದು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಮ್ಮ ನಡಿಗೆ ಶಾಂತಿಯ ಕಡೆಗೆ ಘೋಷವಾಕ್ಯದಡಿ ಬೃಹತ್ ಶಾಂತಿ ನಡಿಗೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಡಿವಿಎಸ್ ವೃತ್ತದಲ್ಲಿನ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಾಂತಿ ನಡಿಗೆ ಜಾಥಾದ ಪ್ರಚಾರ ವಾಹನಕ್ಕೆ ಗುರುವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಚಾಲನೆ ನೀಡಿದರು.

ಜನರ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿರುವುದರಿಂದ ನಿತ್ಯದ ಜೀವನಕ್ಕೂ ತೊಂದರೆಯಾಗುತ್ತಿದೆ. ಶಾಂತಿ, ನೆಮ್ಮದಿ ಕಾಪಾಡುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು. ಆ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತಾಬೇಕೆಂದು ಎಸ್.ಎ.ಮುಸ್ತಫಾ ಹುಸೇನ್ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಅಶಾಂತಿಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾಗರಿಕ ಸಮಾಜದಲ್ಲಿ ನೆಮ್ಮದಿಯ ಬದುಕು ಅವಶ್ಯ. ಪ್ರಾಕೃತಿಕವಾಗಿ ಸುಂದರವಾದ ಶಿವಮೊಗ್ಗ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಸಲ್ಲದು ಎಂದರು.

ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಸರ್ಜಿ ಫೌಂಡೇಷನ್ ಅಧ್ಯಕ್ಷ ಡಾ.ಧನಂಜಯ ಸರ್ಜಿ, ಶಾಂತಿ ನಡಿಗೆ ಸಂಚಾಲಕ ಕೆ.ಪಿ.ಶ್ರೀಪಾಲ, ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪ್ರಮುಖರಾದ ಫಾದರ್ ಕ್ಲಿಫರ್ಡ್ ರೋಷನ್ ಪಿಂಟೋ, ಕಿರಣ್‌ಕುಮಾರ್, ಕೆ.ಎಲ್.ಅಶೋಕ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net