

ಶಿವಮೊಗ್ಗ: ಕನ್ನಡ ಮಾಧ್ಯಮದ 1995ರ ಬಳಿಕ ಆರಂಭವಾದ ಖಾಸಗಿ ಶಾಲಾ, ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಸೆ.14ರಿಂದ ಎರಡು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲು ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ಉಪಾಧ್ಯಕ್ಷ ಯೋಗೇಶ್ ನಾಯ್ಕ, ಸೆ.14ರ ಬೆಳಗ್ಗೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಕೆಂಪು ಪಟ್ಟಿ ಧರಿಸಿ ಖಾಸಗಿ ಶಾಲಾ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಪ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಲಿದ್ದಾರೆ ಎಂದರು.
ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲೇ ನಮ್ಮ ಬೇಡಿಕೆ ಈಡೇರಿಸಬೇಕು. ಎರಡು ದಿನಗಳ ಧರಣಿಗೆ ಸರ್ಕಾರದಿಂದ ಯಾವ ರೀತಿ ಸ್ಪಂದನೆ ಸಿಗಲಿದೆ ಎಂಬುದರ ಮೇಲೆ ನಮ್ಮ ಮುಂದಿನ ನಡೆ ತೀರ್ಮಾನಿಸುತ್ತೇವೆ. ಈ ಬಾರಿ ನಮ್ಮದು ನಿರ್ಣಾಯಕ ಹೋರಾಟವಾಗಿರಲಿದೆ ಎಂದು ಹೇಳಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮನ್ನು ಚುನಾವಣೆ ಕೆಲಸ, ಮೌಲ್ಯಮಾಪನ, ಜನಗಣತಿ ಎಲ್ಲದಕ್ಕೂ ಬಳಸಿಕೊಳ್ಳಲಾಗುತ್ತದೆ. ಆದರೆ ನಮ್ಮ ಸಂಸ್ಥೆಗಳಿಗೆ ವೇತನ ಅನುದಾನ ನೀಡಿ ನಮಗೆ ಜೀವನ ಭದ್ರತೆ ಒದಗಿಸಲು ಸರ್ಕಾರ ಮುಂದಾಗುತ್ತಿಲ್ಲ ಎಂದು ದೂರಿದರು.
ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದರು. 1995ರ ಬಳಿಕ ಆರಂಭವಾದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವೇತನ ಅನುದಾನಕ್ಕೆ ಒಳಪಡಿಸುವ ಪ್ರಕ್ರಿಯೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿತ್ತು. ಆದರೆ ಅವರು ಸಚಿವ ಸ್ಥಾನದಿಂದ ಕೆಳಗಿಳಿದ ಬಳಿಕ ಪ್ರಸ್ತಾವನೆ ನೆನಗುದಿಗೆ ಬಿದ್ದಿತು ಎಂದು ತಿಳಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಸಧಾನಂದ, ಪ್ರಮುಖರಾದ ಸಂತೋಷ್, ಧನಂಹಯ, ಆಕರ್ಷ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.