ಜನರಿಗೆ ಮೂಲ ಸೌಲಭ್ಯ ಒದಗಿಸದಿರುವುದು ಶೋಭೆಯಲ್ಲ: ಬಿಎಸ್‌ವೈ

antyodaya
Published on

ಶಿವಮೊಗ್ಗ: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪುತ್ತಿಲ್ಲ. ಮೂಲ ಸೌಕರ್ಯ ದೊರೆಯುತ್ತಿಲ್ಲ ಎಂದರೆ ಅದು ಯಾವುದೇ ಜನಪ್ರತಿನಿಧಿಗೆ ಶೋಭೆ ತರುವಂತದ್ದಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸರ್ಕಾರದ ಯೋಜನೆಗಳ ಕುರಿತು ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳಿಗೆ ಶನಿವಾರ ನಗರದ ಪ್ರೇರಣಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತ್ಯೋದಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರೃ ದೊರೆತು 75 ವರ್ಷಗಳ ಬಳಿಕವೂ ಮೂಲ ಸೌಕರ್ಯದ ಕೊರತೆ ಬಗ್ಗೆ ಕೆಲವೆಡೆ ದೂರುಗಳು ಕೇಳಿ ಬರುತ್ತಿರುವುದು ವಿಪರ್ಯಾಸ. ಇದನ್ನು ಜನಪ್ರತಿನಿಧಿಗಳೆಲ್ಲರೂ ಗಂಭೀರವಾಗಿ ಪರಿಗಣಿಸಬೇಕೆಂದರು.

ಪ್ರಧಾನಿ ನರೇಂದ್ರ ಮೋದಿ ಕಳೆದ ಎಂಟು ವರ್ಷಗಳಿಂದ ಒಂದು ದಿನವೂ ವಿಶ್ರಾಂತಿ ಪಡೆಯದೇ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಸ್ಥಳೀಯ ಜನಪ್ರತಿನಿಧಿಗಳೂ ಕೂಡಾ ಪ್ರಧಾನಿ ಮೋದಿ ಮಾದರಿಯಲ್ಲೇ ಕೆಲಸ ಮಾಡಬೇಕೆಂದರು.

ಮಧ್ಯವರ್ತಿಗಳ ಹಾವಳಿಯಿಂದ ಭ್ರಷ್ಟಾಚಾರದ ಪರಿಣಾಮವಾಗಿ ಜನರಿಗೆ ನೇರವಾಗಿ ಸರ್ಕಾರದ ಸವಲತ್ತು ದೊರೆಯುತ್ತಿಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ. ಅನೇಕರು ಸರ್ಕಾರದ ಬಗ್ಗೆ ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ಇದನ್ನು ನಿವಾರಣೆ ಮಾಡಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕೆ.ಸಿ.ನಾರಾಯಣ ಗೌಡ, ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಕೆ.ಬಿ.ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು. ಶಾಸಕ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net