ಶಿವಮೊಗ್ಗಕ್ಕೆ ಸಿಗಲಿದೆ ಉಡಾನ್ ಪ್ರಯೋಜನ: ಎಂಬಿಪಾ

udan
ಯಡಿಯೂರಪ್ಪ, ಎಂ.ಬಿ.ಪಾಟೀಲ್, ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ಅವರನ್ನು ಪಕ್ಷಾತೀತವಾಗಿ ಅಭಿನಂದಿಸಿದ ಮುಖಂಡರು.
Published on

ಶಿವಮೊಗ್ಗ: ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ಗೋವಾ, ತಿರುಪತಿ, ಚೆನ್ನೈಗೆ ಉಡಾನ್ ಯೋಜನೆಯ ಮೂಲಕ ನೇರ ವಿಮಾನಯಾನ ಸೌಲಭ್ಯ ಒದಗಿಸಲಾಗುವುದು ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದರು.

ಶಿವಮೊಗ್ಗ ಏರ್‌ಪೋರ್ಟ್‌ನ ಅಧಿಕೃತ ವೆಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸಂಚರಿಸಲಿದೆ. ಅಲ್ಲಿಂದ ದೆಹಲಿ, ಮುಂಬೈ ಮುಂತಾದ ನಗರಗಳಿಗೂ ವಿಮಾನ ಸಂಪರ್ಕ ದೊರೆಯಲಿದೆ ಎಂದರು.
ಉಡಾನ್ ಯೋಜನೆಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಸಾಕಾರಗೊಂಡ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಬ್ಸಿಡಿ ದೊರೆಯಲಿದೆ. ಅತ್ಯಂತ ಕಡಿಮೆ ಮೊತ್ತಕ್ಕೆ ಜನರು ವಿಮಾನ ಪ್ರಯಾಣ ಮಾಡಬಹುದಾಗಿದೆ. 450 ಕೋಟಿರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಏರ್‌ಪೋರ್ಟ್‌ನಲ್ಲಿ ಏರ್‌ಬಸ್, ಬೋಯಿಂಗ್ ಸೇರಿದಂತೆ ಎಲ್ಲಾ ಮಾದರಿ ವಿಮಾನ ನಿಲುಗಡೆಗೆ ಅವಕಾಶವಿದೆ ಎಂದು ಹೇಳಿದರು.
ಕೆಲ ತಿಂಗಳಲ್ಲೇ ರಾತ್ರಿ ವಿಮಾನ ಹಾರಾಟ ಆರಂಭವಾಗುವುದು. ಈ ನಿಲ್ದಾಣಕ್ಕೆ ಕುವೆಂಪು ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗಲಿರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಇಷ್ಟು ವರ್ಷ ನಾಗರಿಕ ವಿಮಾನಯಾನ ಸಚಿವಾಲಯದಿಂದ ರಾಜ್ಯದ ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡಲಾಗುತ್ತಿತ್ತು. ಅವರು ಯಾವುದಕ್ಕೂ ನಮ್ಮನ್ನು ಕೇಳುತ್ತಿರಲಿಲ್ಲ. ಈಗ ಶಿವಮೊಗ್ಗ ಏರ್‌ಪೋರ್ಟ್‌ನ್ನು ರಾಜ್ಯ ಸರ್ಕಾರವೇ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕರಾದ ಶಾರದಾ ಪೂರ‌್ಯಾನಾಯ್ಕಾ, ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net