ವೀರಭದ್ರಸ್ವಾಮಿಯ ಲೀಲೆ ಅನಂತವಾದುದು

5 smg 8a(1)
Published on

ಶಿವಮೊಗ್ಗ: ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಶ್ರೀ ವೀರಭದ್ರಸ್ವಾಮಿಯ ಪವಾಡಗಳನ್ನು ಭೇದಿಸಲು ಸಾಧ್ಯವಾಗಿಲ್ಲ. ಆತನ ಲೀಲೆಗಳು ಅನಂತವಾಗಿವೆ ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸಿಂಹಾನಾಧೀಶ್ವರ ಡಾ. ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ನಗರದ ಚೌಕಿಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಶ್ರೀ ವೀರಭದ್ರೇಶ್ವರ ಜಯಂತೋತ್ಸವದ ಅಂಗವಾಗಿ ಇಷ್ಟಲಿಂಗ ಪೂಜೆ ಮತ್ತು ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವೀರಶೈವ ಧರ್ಮ ಪ್ರಾಚೀನವಾಗಿದ್ದು ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸುತ್ತ ಬಂದಿದೆ ಎಂದರು.

ಶ್ರೀ ಜಗದ್ಗುರು ರಂಭಾಪುರಿ ಪೀಠದ ಕ್ಷೇತ್ರನಾಥ ಗೋತ್ರ ಪುರುಷ ಶ್ರೀ ವೀರಭದ್ರಸ್ವಾಮಿಯ ಅವತಾರ ಅಧರ್ಮ, ಅನ್ಯಾಯವನ್ನು ಸೆದೆಬಡಿದು ಸತ್ಯ ಸಂಸ್ಕೃತಿಯನ್ನು ಎತ್ತಿಹಿಡಿದು ಶಿವ ಸಂಸ್ಕೃತಿಯನ್ನು ಬೆಳೆಸುವುದೇ ಆಗಿದೆ. ವ್ಯಕ್ತಿ ಶಕುನಿಯಾದರೆ ಸಮಾಜ ಛಿದ್ರವಾಗುತ್ತದೆ. ವ್ಯಕ್ತಿ ವೀರಭದ್ರನಾದರೆ ಸಮಾಜ ಭದ್ರಗೊಳ್ಳುತ್ತದೆ. ಸಮಾಜವನ್ನು ಅಭದ್ರಗೊಳಿಸುವ ಹುನ್ನಾರ ನಡೆಯುತ್ತಿದ್ದು ಅದನ್ನು ಮೆಟ್ಟಿ ನಿಲ್ಲಬೇಕಾಗಿದೆ ಎಂದರು.

ನಿಜವಾದ ಆಧ್ಯಾತ್ಮ ಸಂಪತ್ತನ್ನು ಬೆಳೆಸಿ ಸಂರಕ್ಷಣೆ ಮಾಡಿದಾಗ ಅದು ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಶಕ್ತಿಯಾಗುತ್ತದೆ. ಇತಿಹಾಸ ಅರಿಯದವರಿಂದ ಸತ್ಯ ಮರೆ ಮಾಚುವ ಕೆಲಸ ನಡೆದಿದೆ. ಸಮಾಜದಲ್ಲಿ ಸಾತ್ವಿಕ ಶಕ್ತಿ ಬೆಳೆದು ಕಾರ್ಯ ನಿರ್ವಹಿಸಬೇಕಾಗಿದೆ. ವೀರಶೈವ ಲಿಂಗಾಯತ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ವೀರಭದ್ರೇಶ್ವರ ಜಯಂತಿಗೆ ಹೊಸ ಸ್ವರೂಪ ಕೊಟ್ಟು ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಮಳಲಿಯ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದಿನ ಕಲಿಯುಗದಲ್ಲಿ ಶ್ರೀ ವೀರಭದ್ರಸ್ವಾಮಿ ಎಲ್ಲ ದೈವಗಳಲ್ಲಿ ಶ್ರೇಷ್ಠನಾಗಿದ್ದಾನೆ ಎಂದರು. ಇದೇ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ಚರಿತ್ರೆ ಕೃತಿ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net