

ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಬರೋಬ್ಬರಿ 163 ಹಳ್ಳಿಗಳಲ್ಲಿ ನೆರೆ ಸೃಷ್ಟಿಯಾಗಿದೆ.
ನೆರೆಯಿಂದ ಶಿಕಾರಿಪುರ ತಾಲೂಕಿನಲ್ಲಿ ಕಾಳಜಿಕೇಂದ್ರ ಆರಂಭಿಸಿದ್ದು 16 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಗುರುವಾರವೂ ಶಿವಮೊಗ್ಗದಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದ್ದು ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಸೋಮವಾರ ರಾತ್ರಿಯಿಡಿ 60 ಮಿ.ಮೀ. ಮಳೆ ಬಿದ್ದಿದೆ. ಸಾಗರ, ಹೊಸನಗರ, ಶಿಕಾರಿಪುರ, ಶಿವಮೊಗ್ಗ ತಾಲೂಕಿನಲ್ಲಿ ಹೆಚ್ಚು ಹಾನಿ ಉಂಟುಮಾಡಿದೆ. 125 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಮತ್ತು ಮೆಕ್ಕೆಜೋಳ ಬೆಳೆ ಜಲಾವೃತಗೊಂಡಿತ್ತು. ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿಯಲ್ಲಿ ಕೆರೆ ಏರಿಯೊಂದು ಬಿರುಕು ಬಿಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
28 ಮನೆಗಳಿಗೆ ಹಾನಿಯಾಗಿದೆ. ಅದರಲ್ಲಿ 4 ಮನೆಗಳು ಸಂಪೂರ್ಣ ಕುಸಿದಿವೆ. ಮೂರು ಮನೆಗಳು ಗಂಭೀರ ಸ್ಥಿತಿಯಲ್ಲಿವೆ. 21 ಮನೆಗಳು ಭಾಗಶಃ ಹಾನಿಗೀಡಾಗಿವೆ. ಕೆಲವೆಡೆ 10 ವಿದ್ಯುತ್ ಕಂಬಗಳು ಧರೆಗುರುಳಿವೆ.