

ಶಿವಮೊಗ್ಗ: ಭವಿಷ್ಯದಲ್ಲಿ ಮನಃಶಾಸ್ತ್ರ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿಯ ಮನಃಶಾಸ್ತ್ರದ ರಾಜ್ಯ ಪಠ್ಯಕ್ರಮ ಸಮಿತಿ ಸದಸ್ಯ ಡಾ. ಲ್ಯಾನ್ಸಿ ಡಿಸೋಜಾ ಹೇಳಿದರು.
ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಬುಧವಾರ ಮಾನಸ ಟ್ರಸ್ಟ್‌ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಮನಃಶಾಸ್ತ್ರದ ಪಠ್ಯಕ್ರಮದಲ್ಲಿ ಮಾಡಬೇಕಾದ ಪ್ರಮುಖ ಬದಲಾವಣೆಗಳನ್ನು ರಾಜ್ಯ ನೇಮಕ ಮಾಡಿದ ಸಮಿತಿಯು ಆಳವಾಗಿ ವಿಶ್ಲೇಷಿಸುತ್ತಿದೆ. ಮನಃಶಾಸ್ತ್ರದ ಅನ್ವಯಿಕ ಕಲಿಕೆಗೆ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳು ದೊರೆಯುತ್ತಿವೆ ಎಂದರು.
ಮಾನಸ ಟ್ರಸ್ಟ್ ನಿರ್ದೇಶಕಿ ಡಾ. ರಜನಿ ಎ. ಪೈ ಮಾತನಾಡಿ, ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಮನಃಶಾಸ್ತ್ರವನ್ನು 3 ವರ್ಷದ ಪದವಿ, 4 ವರ್ಷದ ಆನರ್ಸ್ ಹಾಗೂ 5 ವರ್ಷದ ಪೂರ್ಣ ಕಲಿಕೆಯೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆಯಲು ಕಾಲೇಜು ಅವಕಾಶ ಮಾಡಿಕೊಡುತ್ತಿದೆ ಎಂದು ವಿವರಿಸಿದರು.
ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅವರ ಶೈಕ್ಷಣಿಕ ಸಲಹೆ, ಕುವೆಂಪು ವಿವಿ ಸಂಯೋಜನೆಯೊಂದಿಗೆ ಕಾಲೇಜಿನಲ್ಲಿ ಮನಃಶಾಸ್ತ್ರಕ್ಕೆ ನುರಿತ ಅಧ್ಯಾಪಕರು, ಉತ್ತಮ ಪ್ರಯೋಗಾಲಯ ಮಾತ್ರವಲ್ಲದೆ ಮಾನಸ ಆಸ್ಪತ್ರೆ ಹಾಗೂ ಇತರ ಕೇಂದ್ರಗಳಲ್ಲಿ ಅನ್ವಯಿಕ ತರಬೇತಿಗೆ ಅವಕಾಶವಿದೆ. ಮಾನಸ ಟ್ರಸ್ಟ್‌ನಿಂದ ಸದ್ಯದಲ್ಲೇ ಶಿವಮೊಗ್ಗದ ಎಲ್ಲ ಕಾಲೇಜು ಪ್ರಾಧ್ಯಾಪಕರಿಗೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಈ ವರ್ಷ ಪದವಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳು, ಪಾಲಕರಿಗೆ ತಜ್ಞರಿಂದ ನೀತಿಯ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಟ್ರಸ್ಟ್‌ನ ಡಾ. ಪ್ರೀತಿ ಶಾನ್‌ಭಾಗ್, ಡಾ. ರಾಜೇಂದ್ರ ಚೆನ್ನಿ, ಪ್ರಾಚಾರ್ಯೆ ಡಾ. ಸಂಧ್ಯಾಕಾವೇರಿ, ಸಿಸ್ಟರ್ ಮಾರೀ ಇವ್ಲಿನ್, ಡಾ. ಅರ್ಚನಾ ಭಟ್ ಇದ್ದರು.