

ಶಿವಮೊಗ್ಗ: ಶರಣ ಪರಂಪರೆಯಲ್ಲಿ ವಿಶೇಷ ಸ್ಥಾನ ಗಳಿಸಿದವರು ಮತ್ತು ಸಮಾಜಕ್ಕೋಸ್ಕರ ಹಲವಾರು ಚಿಂತನೆಗಳನ್ನು ಬಿಟ್ಟು ಹೋಗಿ ಅಮರರಾದವರಲ್ಲಿ ಶ್ರೀ ನುಲಿಯ ಚಂದಯ್ಯ ಅಗ್ರಗಣ್ಯರು ಎಂದು ಎಂಎಲ್‌ಸಿ ಎಸ್.ರುದ್ರೇಗೌಡ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕೊರಮ, ಕೊರಚ, ಕೊರವ ಸಮುದಾಯಗಳ ಸಂಘಟನೆಗಳ ಆಶ್ರಯದಲ್ಲಿ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನುಲಿಯ ಚಂದಯ್ಯ ಅವರಂತಹ ಮಹಾಪುರುಷರ ಆದರ್ಶಗಳನ್ನು ಮತ್ತು ಅವರು ತೋರಿಸಿದ ದಾರಿಯಲ್ಲಿ ಮುಂದೆ ಹೋಗುವ ಅವಶ್ಯಕತೆ ಇದೆ ಎಂದರು.
ಸಮಾಜದ ಒಳಿತನ್ನೇ ಬಯಸುತ್ತ ಮಾರ್ಗದರ್ಶನ ನೀಡಿದವರು ನುಲಿಯ ಚಂದಯ್ಯ. ಕೆರೆಯ ಜಡ್ಡು(ಹುಲ್ಲು) ತಂದು ಅದರಿಂದ ಹಗ್ಗ ಹೊಸೆಯುವ ನಿಷ್ಠ ಕಾಯಕ ಮಾಡಿಕೊಂಡಿದ್ದರು. ಹಗ್ಗ ಮಾರಾಟದಿಂದ ಬಂದ ಹಣವನ್ನು ಜಂಗಮ ದಾಸೋಹಕ್ಕೆ ಬಳಸುತ್ತಿದ್ದರು. ಅವಶ್ಯಕತೆಗಿಂತ ಹೆಚ್ಚು ಸಂಪಾದನೆ ಮಾಡಬಾರದು. ಮಾಡಿದ ಸಂಪಾದನೆಯನ್ನು ಒಳ್ಳೆಯ ಕಾರ್ಯಕ್ಕೆ ಬಳಸಬೇಕು ಎಂಬುದನ್ನು ಜಗತ್ತಿಗೆ 12ನೇ ಶತಮಾನದಲ್ಲೇ ಸಾರಿದ್ದರು ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್.ಎಂ.ಮುತ್ತಯ್ಯ ವಿಶೇಷ ಉಪನ್ಯಾಸ ನೀಡಿದರು. ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಕೆ.ಬಿ.ಅಶೋಕ್ ನಾಯ್ಕ, ಎಂಎಲ್‌ಸಿ ಡಿ.ಎಸ್.ಅರುಣ್, ಡಿಸಿ ಡಾ. ಆರ್.ಸೆಲ್ವಮಣಿ, ಸಮಾಜದ ಜಿಲ್ಲಾಧ್ಯಕ್ಷ ಕೆ.ಪಿ.ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ರಾಜ್ಯ ಕುಳುವ ಮಹಾಸಭಾದ ಅಧ್ಯಕ್ಷ ಕೆ.ಎನ್.ಪ್ರಭು ಇದ್ದರು.