

ಶಿವಮೊಗ್ಗ: ದೇಶವನ್ನು ವಿಶ್ವ ಗುರುವಾಗಿಸಲು ನೂತನ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ)ಯೊಂದೇ ಪ್ರಮುಖ ಅಸ್ತ್ರ ಎಂದು ಮೈಸೂರಿನ ಕೌಟಿಲ್ಯ ವಿದ್ಯಾಲಯದ ಪ್ರಾಚಾರ್ಯೆ ಡಾ. ಎಲ್.ಸವಿತಾ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ರೋಟರಿ ಮಿಡ್‌ಟೌನ್‌ನಿಂದ ಬುಧವಾರ ಎನ್‌ಇಪಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ, ಪ್ರತಿ ಕ್ಷೇತ್ರದಲ್ಲಿಯೂ ಬದಲಾವಣೆ ಆಗುತ್ತಿದೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆಯ ಅಗತ್ಯವಿದೆ. ಹೀಗಾಗಿ ಹೊಸ ನೀತಿ ಜಾರಿಯಾಗುತ್ತಿದೆ. ಬ್ರಿಟಿಷರ ಕಾಲದಿಂದಲೂ ಇದೇ ಶಿಕ್ಷಣ ಪದ್ಧತಿಯಲ್ಲಿ ಇಲ್ಲಿವರೆಗೂ ಮುಂದುವರಿಸಿಕೊಂಡು ಬಂದಿದ್ದೇವೆ. ಇದೀಗ ಎನ್‌ಇಪಿ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಕಾಲ ಬಂದಿದೆ ಎಂದರು.
ನೂತನ ಶಿಕ್ಷಣ ನೀತಿ ಸಿದ್ಧಪಡಿಸುವಾಗ 2 ಲಕ್ಷ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸಾಕಷ್ಟು ಕೆಲಸ ಮಾಡಿ 65 ಪುಟಗಳ ನೀತಿ ಸಿದ್ಧಪಡಿಸಿದ್ದಾರೆ. ಅದನ್ನು ಅಧ್ಯಯನ ಮಾಡಿದರೆ ಮಾತ್ರ ಶಿಕ್ಷಣ ನೀತಿ ಅರ್ಥವಾಗುತ್ತದೆ. ಆದರೆ ದೇಶದಲ್ಲಿ ಬದಲಾವಣೆ ವಿಚಾರದಲ್ಲಿ ವಿರೋಧಗಳು ವ್ಯಕ್ತವಾಗುವುದು ಸಹಜವಾಗಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಸ್.ಅರುಣ್ ಮಾತನಾಡಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎನ್‌ಇಪಿ ಕಾರ್ಯಾಗಾರ ಉದ್ಘಾಟಿಸಿದರು. ಮಿಡ್‌ಟೌನ್ ಕಾರ್ಯದರ್ಶಿ ಅನಿಲ್ ಶೆಟ್ಟಿ, ಪ್ರಮುಖರಾದ ರಾಮಪ್ಪ, ಪ್ರತಿಭಾ ಅರುಣ್, ಬಿಂದು ಅನಿಲ್, ಡಾ. ನಾರಾಯಣ, ಪ್ರೊ. ಎ.ಎಸ್.ಚಂದ್ರಶೇಖರ್ ಎಚ್.ಎಲ್.ರವಿ, ಡಿ.ಎಂ.ಶಂಕರಪ್ಪ, ಸಂತೋಷ್ ಬಳ್ಳೇಕೆರೆ, ರಾಮಲಿಂಗಯ್ಯ ಇದ್ದರು.