

ಶಿವಮೊಗ್ಗ: ಪ್ರತಿ ಮನೆಯಲ್ಲೂ ತಿರಂಗಾ ಹಾರಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ದೇಶ ಪ್ರೇಮದ ಹೆಸರಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಅಥವಾ ಅಗೌರವ ಉಂಟು ಮಾಡುವುದನ್ನು ಒಪ್ಪುವುದಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.
ಬಿಜೆಪಿ ಸರ್ಕಾರ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಕರೆ ನೀಡಿದೆ. ಇದು ಸಂತೋಷ. ಆದರೆ, ರಾಷ್ಟ್ರಧ್ವಜಗಳನ್ನು ಹಾರಿಸುವಾಗ ನಿಯಮಗಳನ್ನು ಪಾಲನೆ ಮಾಡಬೇಕು. ಬೇರೆ ಬೇರೆ ಕಾರಣಕ್ಕಾಗಿ ರಾಷ್ಟ್ರಧ್ವಜ ಹಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವುದು ಸರಿಯಲ್ಲ ಎಂದರು.
ಮನೆಗಳಲ್ಲಿ ಧ್ವಜ ಹಾರಿಸುವ ರೈತರಿಗೆ ತರಬೇತಿ ನೀಡಲಾಗುವುದು. ರಾಜ್ಯ ಸರ್ಕಾರದಿಂದಲೂ ಆ ಕ್ರಮ ಆಗಬೇಕಿದೆ. ಇನ್ನೂ ಕಾಲ ಮಿಂಚಿಲ್ಲ. ಅವಮಾನ ಅಥವಾ ಅಗೌರವ ಉಂಟು ಮಾಡುವ ಮುನ್ನವೇ ಎಚ್ಚೆತ್ತುಕೊಂಡು ತಿರಂಗಾ ಹಾರಿಸುವ ಬಗ್ಗೆ ತರಬೇತಿ ನೀಡಬೇಕು. ಧ್ವಜ ಹಾರಿಸಲು ಬಹಳಷ್ಟು ಅಧಿಕಾರಿಗಳಿಗೇ ಮಾಹಿತಿ ಇಲ್ಲ ಎಂದರು.
ಸಾಲಗಾರರಾದ ನಮ್ಮ ಮನೆಗಳ ಮೇಲೆ ಬಾವುಟ ಹಾರಿಸುವುದಕ್ಕಿಂತ ಬೆಲೆ ಸಿಗುವಂತೆ ಸರ್ಕಾರಗಳು ಯೋಚಿಸಬೇಕು ಎಂದ ಅವರು, ರಾಷ್ಟ್ರಧ್ವಜ ಮೊದಲು ಖಾದಿ ಬಟ್ಟೆಯಲ್ಲಿ ತಯಾರಾಗುತ್ತಿತ್ತು. ಅದಕ್ಕೊಂದು ನಿಯಮವೂ ಇತ್ತು. ಆದರೆ ಈಗ ಪ್ಲಾಸ್ಟಿಕ್, ಪಾಲಿಸ್ಟರ್ ಸೇರಿದಂತೆ ಹಲವು ಮಾದರಿಯಲ್ಲಿ ತಯಾರಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.