

ಶಿವಮೊಗ್ಗ: ಜನವರಿಯಲ್ಲಿ ತಾಲೂಕಿನ ಹೊಳೆಬೆನವಳ್ಳಿ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಬೈಕ್ ಸವಾರನ ಕುಟುಂಬಕ್ಕೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ 19 ಲಕ್ಷ ರೂ. ಚೆಕ್ಕನ್ನು ವಿತರಿಸಲಾಯಿತು. ಜಿಲ್ಲಾ ನ್ಯಾಯಾಲಯದಲ್ಲಿ ನಡೆದ 3ನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಚೆಕ್ ಹಸ್ತಾಂತರಿಸಿದರು.
ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎಸ್.ರೇಣು ಅವರು 2022ರ ಜ.28ರಂದು ಬೈಕ್‌ನಲ್ಲಿ ಹೊಳೆಹೊನ್ನೂರು ಕಡೆಗೆ ಹೋಗುವಾಗ ತಾಲೂಕಿನ ಹೊಳೆಬೇವನಹಳ್ಳಿ ಗ್ರಾಮದ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದರು. ರೇಣು ಅವರು ವಿಮೆ ಮಾಡಿಸಿದ್ದರೂ ಕಂಪನಿಯವರು ವಿಮಾ ಮೊತ್ತ ಪಾವತಿಸಿರಲಿಲ್ಲ. ಹಾಗಾಗಿ ರೇಣು ಅವರ ಪತ್ನಿ ಕೋಕಿಲಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಕಳೆದ ಏಳು ತಿಂಗಳಿಂದ ವಿಮಾ ಮೊತ್ತ ಪಾವತಿಸುವ ವಿಚಾರದಲ್ಲಿ ಹಗ್ಗ-ಜಗ್ಗಾಟ ನಡೆದಿತ್ತು. ಅಂತಿಮವಾಗಿ ಪ್ರಕರಣವನ್ನು ಲೋಕ ಅದಾಲತ್‌ಗೆ ತಂದು ಇತ್ಯರ್ಥಗೊಳಿಸಲಾಯಿತು. ನ್ಯಾಯಾಧೀಶರ ಸಮ್ಮುಖದಲ್ಲೇ ನ್ಯೂ ಇಂಡಿಯಾ ಅಸ್ಯೂರೆನ್ಸ್ ಕೊ. ಲಿಮಿಟೆಡ್ ವಿಮಾ ಕಂಪನಿ ಅಧಿಕಾರಿಗಳು ರೇಣು ಅವರ ಪತ್ನಿ ಕೋಕಿಲಾ ಅವರಿಗೆ ಪರಿಹಾರವಾಗಿ 19 ಲಕ್ಷ ರೂ. ಚೆಕ್ಕನ್ನು ವಿತರಿಸಿದರು.
ಬಳಿಕ ಮಾತನಾಡಿದ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್, ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿದೆ. ಜಿಲ್ಲೆಯಲ್ಲಿ 52 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ವಕೀಲರು ಮತ್ತು ಕಕ್ಷಿದಾರರ ಸಹಕಾರದಿಂದ 10 ಸಾವಿರ ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿದೆ. ಸುಮಾರು 5 ಸಾವಿರ ಪ್ರಕರಣಗಳಿಗೆ ತೀರ್ಪು ಪ್ರಕಟಿಸಲಾಗಿದೆ ಎಂದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಇದ್ದರು.
26,637 ಪ್ರಕರಣಗಳ ಸಂಧಾನ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇದ್ದ 26,637 ರಾಜಿ ಪ್ರಕರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸಂಧಾನ ಮಾಡಿಸುವ ಮೂಲಕ ಇತ್ಯರ್ಥಪಡಿಸಲಾಯಿತು. ಬಾಕಿ ಇದ್ದ ವಿವಿಧ ಸ್ವರೂಪದ 7,228 ಪ್ರಕರಣಗಳನ್ನು ಹಾಗೂ 19,409 ವ್ಯಾಜ್ಯ ಪೂರ್ವ ಪ್ರಕರಣಗಳಿದ್ದವು. ಪ್ರಕರಣಗಳ ರಾಜಿ ಮಾಡಿಸಲು ಶಿವಮೊಗ್ಗ ನಗರದಲ್ಲಿ 15, ಭದ್ರಾವತಿ 7, ಸಾಗರ, ತೀರ್ಥಹಳ್ಳಿಯಲ್ಲಿ ತಲಾ 4, ಶಿಕಾರಿಪುರದಲ್ಲಿ 3, ಹೊಸನಗರ ಮತ್ತು ಸೊರಬದಲ್ಲಿ ತಲಾ 2 ಪೀಠಗಳನ್ನು ರಚಿಸಲಾಗಿತ್ತು ಎಂದು ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ತಿಳಿಸಿದ್ದಾರೆ.