

ಶಿವಮೊಗ್ಗ: ತಾಲೂಕಿನ ತಮ್ಮಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಕೂಡಿ ಗ್ರಾಮದಲ್ಲಿರುವ ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಯನ್ನು ಜಂಟಿ ಸರ್ವೇ ಮಾಡಿ ಡಿನೋಟಿಫೈಗೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಶನಿವಾರ ಸಂತ್ರಸ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೂಡಿ ಗ್ರಾಮದ ಸರ್ವೇ ನಂಬರ್‌ಗಳಾದ 30ರಿಂದ 35ರ ವರೆಗೆ ಶರಾವತಿ ಸಂತ್ರಸ್ತರಿಗೆ ನೀಡಿದ್ದ ಭೂಮಿಯನ್ನು ಈ ಹಿಂದೆ ಡಿನೋಟಿಫೈ ಮಾಡುವ ಸಂದರ್ಭದಲ್ಲಿ ದಾಖಲೆ ಇರುವ ಲಾನುಭವಿಗಳನ್ನು ಹೊರತುಪಡಿಸಿ ನಕಾಶೆ ತಯಾರಿಸಲಾಗಿತ್ತು. ಇದನ್ನು ಸರಿಪಡಿಸುವಂತೆ ಮನವಿ ಮಾಡಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡರು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಡಿನೋಟಿಫೀಕೇಶನ್ ಆದೇಶಗಳನ್ನು ರದ್ದುಪಡಿಸಿದೆ. ಆದರೆ ಈಗ ಕೂಡಿ ಗ್ರಾಮದ ಸರ್ವೇ ನಂ.31 ಹಾಗೂ 32ರಲ್ಲಿ ಜಂಟಿ ಸರ್ವೇ ಮಾಡಲು ಸರ್ಕಾರ ಆದೇಶ ಮಾಡಿ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಕೇವಲ ಎರಡಲ್ಲಿ ಸರ್ವೇ ಮಾಡಿದರೆ ಉಳಿದ ಲಾನುಭವಿಗಳಿಗೆ ನ್ಯಾಯ ಸಿಗುವುದಿಲ್ಲ. ಹಾಗಾಗಿ ಗ್ರಾಮದ ಎಲ್ಲ ಸರ್ವೇ ನಂಬರ್‌ಗಳಲ್ಲಿಯೂ ಜಂಟಿ ಸರ್ವೇ ಮಾಡಿ ಈ ಹಿಂದೆ ಆಗಿರುವ ಲೋಪವನ್ನು ಸರಿಪಡಿಸುವಂತೆ ಡಿಡಿಎಲ್‌ಆರ್(ಭೂ ದಾಖಲೆಗಳ ಉಪ ನಿರ್ದೇಶಕ) ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ನಾರಾಯಣ ಸ್ವಾಮಿ, ಸದ್ಯಕ್ಕೆ ಸರ್ವೇ ನಿಲ್ಲಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ದಾಖಲೆ ಇದ್ದರೂ ಈ ಹಿಂದೆ ತಯಾರಿಸಿರುವ ನಕಾಶೆಯಿಂದ ಹೊರ ಹೋಗಿರುವ ಲಾನುಭವಿಗಳನ್ನು ಸೇರಿಸಿ ನಕಾಶೆ ತಯಾರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸ್ಥರಾದ ದ್ಯಾವಪ್ಪ, ಹೂವಪ್ಪ, ಸ್ವಾಮಿನಾಯ್ಕ, ಕೃಷ್ಣಪ್ಪ ಸಂಪಿಗೆಹಳ್ಳ, ದೇವೇಂದ್ರ, ಸುಕುಮಾರ್, ಲಕ್ಷ್ಮೀನಾರಾಯಣ, ಧರ್ಮಪ್ಪ, ಕೃಷ್ಣಪ್ಪ, ವೆಂಕಟೇಶ್, ಸುರೇಶ್ ಮತ್ತಿತರರಿದ್ದರು.