

ಶಿವಮೊಗ್ಗ: ಕನಕದಾಸರು ಹಿಂದುತ್ವದ ಮೊದಲ ಪ್ರತಿಪಾದಕರಾಗಿದ್ದರು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ ಕನಕದಾಸರು ವಿರೋಧಿಸುತ್ತಿದ್ದ ಜಾತಿ ವ್ಯವಸ್ಥೆ ಸಮಾಜದಲ್ಲಿ ಇಂದಿಗೂ ಮುಂದುವರಿಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ಕುರುಬರ ಸಂಘದ ಆಶ್ರಯದಲ್ಲಿ ಕನಕದಾಸರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಕುಲದಿಂದ ಹೊರಬರಬೇಕೆಂದು ಕನಕದಾಸರು ಜಗತ್ತಿಗೆ ಸಾರಿದ್ದರು. ಆದರೆ ನಮ್ಮ ನಡುವೆಯೇ ಜಾತಿ ವ್ಯವಸ್ಥೆ ಇದ್ದು ಇದನ್ನು ವಿಶ್ವ ಗೌರವಿಸುವುದಿಲ್ಲ. ಇದೇ ವ್ಯವಸ್ಥೆ ಮುಂದುವರಿದಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲದಂತೆ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಸಮಾಜದಿಂದ ಕುಲವೆಂಬುದನ್ನು ತೆಗೆದು ಹಾಕಿ ಜಾತಿ ವ್ಯವಸ್ಥೆಯಿಂದ ಹೊರ ಬರಬೇಕೆಂದು ಕನಕದಾಸರು 535 ವರ್ಷಗಳ ಹಿಂದೆಯೇ ಸಾರಿದ್ದರು. ಆದ್ದರಿಂದ ನಾವುಗಳು ಕನಕದಾಸರಂತಹ ಮಹಾನ್ ಪುರುಷರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಒಟ್ಟಾಗಿ ಮುನ್ನಡೆಯಬೇಕಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಕನಕದಾಸರು ಜಾತಿ ವ್ಯವಸ್ಥೆಯಿಂದ ಹೊರ ಬಂದು ಮನುಕುಲ ಒಂದೇ ಎಂಬ ಚಿಂತನೆ ನೀಡಿದ್ದು ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಕನಕದಾಸರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್ ಮಾತನಾಡಿ, ದಾಸರ ತತ್ವಗಳನ್ನು ಅವಲೋಕಿಸಿ ಅಳವಡಿಸಿಕೊಂಡು ಜಾತಿ ವ್ಯವಸ್ಥೆಯಿಂದ ಹೊರ ಬರಬೇಕಾಗಿತ್ತದೆ ಎಂದು ಹೇಳಿದರು.
ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ್, ಪಾಲಿಕೆ ಪ್ರತಿಪಕ್ಷದ ನಾಯಕಿ ರೇಖಾ ರಂಗನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಡಿಸಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಡಿಸಿ ನಾಗೇಂದ್ರ ಎಫ್ ಹೊನ್ನಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಉಪಸ್ಥಿತರಿದ್ದರು.