

ಶಿವಮೊಗ್ಗ: ಅಕ್ಷರ ಸಂಸ್ಕೃತಿ ಮತ್ತು ಸಂಘಟನೆಯಿಂದ ಮಾತ್ರ ಹಿಂದುಳಿದ, ತಳ ಸಮುದಾಯಗಳ ಏಳಿಗೆ ಸಾಧ್ಯ ಎಂದು ಕನಕ ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಕನಕನಗರದ ಶ್ರೀ ಬೀರಲೀಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಶ್ರೀ ಬೀರಲಿಂಗೇಶ್ವರ ಭಕ್ತ ಮಂಡಳಿಯಿಂದ ಬೀರಪ್ಪ ದೇವರ ಭಂಡಾರ ಜಾತ್ರೆಯಲ್ಲಿ ಜೋಗತಿಯವರಿಗೆ ಉಡಿ ತುಂಬಿ ಆಶೀರ್ವಚನ ನೀಡಿದ ಅವರು, ತಳಸಮುದಾಯಗಳು ಶಿಕ್ಷಣದಿಂದ ದೂರ ಉಳಿದಿದ್ದಕ್ಕೆ ಇಡೀ ಸಮಾಜ ಹಿಂದುಳಿದಿದೆ ಎಂದರು.
ತಳ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮುಂದಿನ ಪೀಳಿಗೆ ಮಕ್ಕಳ ತಲೆ ಮೇಲೆ ಬುಟ್ಟಿ(ಜೋಗತಿ)ಹೋರಿಸಬೇಡಿ. ಶಿಕ್ಷಣ ಇಡೀ ಸಮುದಾಯವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದು ಜನ್ಮ ಕುಂಡಲಿ ನೋಡಿ ಶಿಕ್ಷಣ ಪಡೆಯಲು ಅಥವಾ ಕೊಡಿಸಲು ಸಾಧ್ಯವಿಲ್ಲ. ಅವಿದ್ಯಾವಂತರ ಕೈಗೆ ಮಕ್ಕಳ ಜನ್ಮಕುಂಡಲಿ ಕೊಡುವುದು ಬಿಡಬೇಕು. ಈ ಮೂಲಕ ಕೆಟ್ಟ ಸಂಪ್ರದಾಯವನ್ನು ಬದಲಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಕುರುಬ ಸಮಾಜದ ಮುಖಂಡ ನವುಲೆ ಈಶ್ವರಪ್ಪ ಮತ್ತು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ ಮಾತನಾಡಿದರು. ವಿನೋಬನಗರದ ಶಿವಾಲಯದ ಎದುರು ಕನಕ ರಥಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಚಾಲನೆ ನೀಡಿ ರಥದೊಂದಿಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಜೋಗತಿಯರಿಗೆ ಉಡಿ ತುಂಬಲಾಯಿತು. ಮುಖಂಡ ಸೋಮಸುಂದರ್, ಭಕ್ತ ಮಂಡಳಿ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಸಿ.ಎಚ್.ಮಾಲತೇಶ್, ಸದಸ್ಯರಾದ ಕೆ.ರಂಗನಾಥ, ಎಚ್.ಪಾಲಾಕ್ಷಿ ಆನಂದ್, ಮಂಜು, ನವುಲೆ ಮೋಹನ್ ಉಪಸ್ಥಿತರಿದ್ದರು.