

ಶಿವಮೊಗ್ಗ: ನಗರದ ಹೊರವಲಯದ ಮಾಚೇನಹಳ್ಳಿ ಸಮೀಪ ಇದೇ ತಿಂಗಳ 19 ಹಾಗೂ 20ರಂದು ನಡೆಯಬೇಕಿದ್ದ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳವನ್ನು ಉಡುಪಿ ಜಿಲ್ಲೆಯ ಬೈಂದೂರಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಕಂಬಳದ ವಿರುದ್ಧ ಪ್ರಾಣಿದಯಾ ಸಂಘಟನೆ ಪ್ರಮುಖರು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಶಿವಮೊಗ್ಗದಲ್ಲಿ ಮೊದಲಕ ಕಂಬಳ ಆಯೋಜನೆಯ ಅವಕಾಶ ಕೈತಪ್ಪಿದಂತಾಗಿದೆ.
ಮಹತ್ವದ ಸಭೆಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಬೆಂಗಳೂರು, ಶಿವಮೊಗ್ಗ ಮುಂತಾದ ದೂರದ ಸ್ಥಳಗಳಲ್ಲಿ ಕಂಬಳ ಆಯೋಜಿಸುವುದರಿಂದ ಕೋಣಗಳಿಗೆ ತೊಂದರೆ ನೀಡಿದಂತಾಗುತ್ತದೆ ಎಂದು ಪ್ರಾಣಿದಯಾ ಸಂಘದ ಪ್ರಮುಖರ ಕೋರ್ಟ್ ಮೆಟ್ಟಿಲೇರಿದ್ದರು. ಈಗಾಗಲೇ ಕೋರ್ಟ್‌ಗೆ ಮಾಹಿತಿ ನೀಡಿರುವ ಕಂಬಳ ಸಮಿತಿ ಪದಾಧಿಕಾರಿಗಳು, ದೂರದ ಊರಿಗೆ ಕೊಂಡೊಯ್ಯುವಾಗ ಕಂಬಳದ ಕೋಣಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಾಚೇನಹಳ್ಳಿ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಮೀಪ 16 ಎಕರೆ ವಿಸ್ತೀರ್ಣದಲ್ಲಿ ಕಂಬಳದ ಟ್ರಾೃಕ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿತ್ತು. 100 ಜೋಡಿ ಕೋಣಗಳು ಹಾಗೂ 10 ಲಕ್ಷ ಜನರು ಸೇರುವ ನಿರೀಕ್ಷೆಯಿತ್ತು. ಈಗ ಶಿವಮೊಗ್ಗ ಕಂಬಳಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.