

ಶಿವಮೊಗ್ಗ: ರಾಜ್ಯದಲ್ಲಿಯೇ ಅತಿ ಹೆಚ್ಚು ಅರಣ್ಯ ನಾಶವಾದ ಜಿಲ್ಲೆ ಶಿವಮೊಗ್ಗ. ಈ ನಿಟ್ಟಿನಲ್ಲಿ ಭವಿಷ್ಯದ ದೃಷ್ಟಿಯಿಂದ ಅರಣ್ಯವನ್ನು ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಆಲ್ಕೊಳದ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹದ ಚಂದನವನ ಪಾರ್ಕ್‌ನಲ್ಲಿ ಶನಿವಾರ ವೃಕ್ಷಲಕ್ಷ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್ ಆಶ್ರಯದಲ್ಲಿ ಶಂಕರ ವಲಯ, ಅರಣ್ಯ ಇಲಾಖೆ ಸಹಯೋಗದಲ್ಲಿ ಜಾಗತಿಕ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮ ನೈಸರ್ಗಿಕ ಭೂಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಅಭಿಯಾನದಲ್ಲಿ ಮಾತನಾಡಿದ ಅವರು, ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಜಾಗೃತಿ ಅಭಿಯಾನ ಮಹತ್ವ ಪಡೆದಿದೆ ಎಂದರು.
ವಿಶೇಷವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಗೋಮಾಳ, ಕಾನು ಭೂಮಿ, ಪಾರ್ಕ್ ಜಾಗಗಳ ರಕ್ಷಣೆಗೆ ಅರಣ್ಯ ಇಲಾಖೆಯು ಸಂಘಸಂಸ್ಥೆಗಳ ಸಹಯೋಗದಲ್ಲಿ ಕ್ರಮ ಕೈಗೊಳ್ಳಬೇಕಿದೆ. ಪಾಲಿಕೆ ವ್ಯಾಪ್ತಿಯ ಕಂದಾಯ ಭೂಮಿ ಒತ್ತುವರಿಯಾಗಿದೆ. ರಾಗಿಗುಡ್ಡದಲ್ಲಿನ ಕಂದಾಯ ಭೂಮಿಯನ್ನು ಬೇರೆ ಬೇರೆ ಉದ್ದೇಶಗಳಿಗೆ ನೀಡಲಾಗಿದೆ. ಉಳಿದ ಭೂಮಿಯಲ್ಲಾದರೂ ಗಿಡಗಳನ್ನು ಬೆಳೆಸಬೇಕಿದೆ ಎಂದು ಸಲಹೆ ನೀಡಿದರು.
ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ, ವಲಯ ಅರಣ್ಯಾಧಿಕಾರಿ ವಿಜಯಕುಮಾರ, ಪ್ರಮುಖರಾದ ಎಂ.ಆರ್.ಪಾಟೀಲ್, ವೆಂಕಟೇಶ್ ಕವಲಗೋಡು, ಪ್ರೊ. ಕೆ.ಎಲ್.ಶ್ರೀಪತಿ, ಓಪನ್ ಮೈಂಡ್ ಶಾಲೆಯ ಉಮಾ, ಬಾಲಕೃಷ್ಣ ನಾಯ್ಡು ಇತರರಿದ್ದರು.