

ಶಿವಮೊಗ್ಗ: ಬೆಂಗಳೂರಿನ ಕೆ.ಆರ್.ಪುರಂ ಇನ್‌ಸ್ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲಿ ಅನುಮಾನಗಳಿದ್ದು ಯಾರಾದರೂ ನಿರ್ದಿಷ್ಟವಾಗಿ ದೂರು ನೀಡಿದರೆ ಮಾತ್ರ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನಾರೋಗ್ಯದಿಂದ ನಂದೀಶ್ ಮೃತಪಟ್ಟಿದ್ದಾರೆಂದು ಪ್ರಾಥಮಿಕ ವರದಿ ಹೇಳುತ್ತಿದೆ. ನನಗಿರುವ ಮಾಹಿತಿಯಂತೆ ನಂದೀಶ್‌ಗೆ ಆರೋಗ್ಯ ಸರಿ ಇರಲಿಲ್ಲ. ಅವರ ಸಂಬಂಧಿಕರು ದೂರು ನೀಡಿದರೆ ಕಾನೂನು ಪ್ರಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ನಂದೀಶ್ ವರ್ಗಾವಣೆ ವಿಚಾರದಲ್ಲಿ ಹಣಕಾಸಿನ ಕುರಿತು ಸಚಿವ ಎಂ.ಟಿ.ಬಿ.ನಾಗರಾಜ್ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಈ ಬಗ್ಗೆ ಎಂಟಿಬಿ ನಾಗರಾಜ್ ಅವರನ್ನೇ ಕೇಳಬೇಕು ಎಂದರು.
ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಗಿಫ್ಟ್ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಗಿಫ್ಟ್ ವಿಚಾರದಲ್ಲಿ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯೂ ಇಲ್ಲ. ದೀಪಾವಳಿ ಸಂದರ್ಭದಲ್ಲಿ ಪತ್ರಕರ್ತರಿಗೆ ಸಿಹಿ ಹಂಚುವುದು ಸಾಮಾನ್ಯ. ಎಲ್ಲ ಸಿಎಂಗಳೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಹಣ ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.